Search Literature Discussion FAQ's Authors Vachanas Other Writeups
Home Search Vachanakaras Vachanas Vachana Songs


ಪ್ರಕಾಶಕರ ಮಾತು

      

     ವಚನ ಸಾಹಿತ್ಯ ಕರ್ನಾಟಕದ ಬಹುದೊಡ್ಡ ಸಾಂಸ್ಕೃತಿಕ ಸಂಪತ್ತು. 12ನೆಯ ಶತಮಾನದಲ್ಲಿ ನಡೆದ ಸಾಮಾಜಿಕ, ಧಾರ್ಮಿಕ ಚಳವಳಿಯ ಫಲವಾಗಿ ಅಭಿವ್ಯಕ್ತಿಗೊಂಡ ಈ ವಚನಸಾಹಿತ್ಯವು ಸಮಾಜದ ಎಲ್ಲ ವರ್ಗಗಳ ವಿಚಾರ, ಚಿಂತನೆಗಳ ಫಲವಾಗಿದೆ. ಕನ್ನಡ ಸಾಹಿತ್ಯದ ದಿಕ್ಕನ್ನು ಬದಲಿಸಿದ ವೈಚಾರಿಕ ಪ್ರಪಂಚಕ್ಕೆ ಅಮೂಲ್ಯ ಕೊಡುಗೆ ನೀಡಿದ ಸಾಹಿತ್ಯ ಪ್ರಕಾರವಾಗಿದೆ. ಕರ್ನಾಟಕ ಜನಸಾಮಾನ್ಯರ ಧ್ವನಿಯಾಗಿರುವ ವಚನ ಸಾಹಿತ್ಯವು ನಮ್ಮ ಪರಂಪರೆಯ ಅಪೂರ್ವಸೃಷ್ಟಿ.

     

ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 1993ರಲ್ಲಿ ಸಮಗ್ರ ವಚನ ಸಾಹಿತ್ಯವನ್ನು 15 ಸಂಪುಟಗಳಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿತ್ತು. ನಂತರ 2001ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಸಮಗ್ರ ವಚನಸಾಹಿತ್ಯದ ಪರಿಷ್ಕೃತ ಆವೃತ್ತಿ ಪ್ರಕಟವಾಯಿತು. ಹೊಸ ವಿಚಾರ, ಹೊಸ ಶೋಧನೆಗಳ ಬೆಳಕಿನಲ್ಲಿ ಲಭ್ಯ ವಚನಗಳನ್ನು 15 ಸಂಪುಟಗಳಲ್ಲಿ ಹೊರತರಲಾಯಿತು. ದಾಸಸಾಹಿತ್ಯದ ಬಹುಮಾಧ್ಯಮ ಯೋಜನೆಯ ಯಶಸ್ಸಿನಿಂದ ವಚನಸಾಹಿತ್ಯವನ್ನು ಬಹುಮಾಧ್ಯಮದಲ್ಲಿ ಹೊರತರಲು ನಿರ್ಧರಿಸಲಾಯಿತು. ಅದರಂತೆ 2001ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿಸಲಾಗಿದ್ದ ವಚನ ಸಾಹಿತ್ಯವನ್ನು ಸಿ.ಡಿ. ಹಾಗೂ ಅಂತರ್ಜಾಲದಲ್ಲಿ ಹೊರತಂದು ಸಮಗ್ರ ವಚನಸಾಹಿತ್ಯವನ್ನು ವಿಶ್ವದಾದ್ಯಂತ ತಲುಪಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯೋಚಿಸಿತು. ಇಂಥ ಪರಿಕಲ್ಪನೆಯು ಒಂದು ಅದ್ಭುತ ಸಂಗತಿಯಾಗಿದೆ. ಈ ಯೋಜನೆಯ ರೂವಾರಿಗಳಾದ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿ.ಎಸ್.ಕೇದಾರ್, ಶ್ರೀಮತಿ ಉಷಾಗಣೇಶ್ ಅವರನ್ನು ಹಾಗೂ ಇಂದಿನ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ಸಿ.ಎಸ್.ಕೆಶ್ರೀ ಬಿ.ಆರ್.ಜಯರಾಮರಾಜೇ ಅರಸ್ ಅವರನ್ನು ಈ ಸಂದರ್ಭದಲ್ಲಿ ಕೃತಜ್ಞತಾಪೂರ್ವಕವಾಗಿ ನೆನಪಿಸಿಕೊಳ್ಳಬೇಕಾದುದು ಅಗತ್ಯ. ಅವರಿಗೆ ನಾನು ಆಭಾರಿಯಾಗಿದ್ದೇನೆ.

 

      ಶ್ರೀ ಸಿ.ಎಸ್.ಕೆ ಈ ಬೃಹತ್ ಯೋಜನೆಯನ್ನು ಕಾರ್ಯಗತಗೊಳಿಸಲು ಉಂಟಾದ ಕೆಲವು ತಾಂತ್ರಿಕ ತೊಡಕುಗಳನ್ನು ನಿವಾರಿಸಿಕೊಂಡು ಹಲವಾರು ತಾಂತ್ರಿಕ ಸಂಸ್ಥೆಗಳೊಂದಿಗೆ ಸಮಾಲೋಚಿಸಿ ಒಂದು ಮಾದರಿ ಯೋಜನೆಯನ್ನು ರೂಪಿಸಲಾಯಿತು. ಇವರೆಲ್ಲರ ಸಹಕಾರದೊಂದಿಗೆ ಒಂದು ಸಮರ್ಪಕವೆನ್ನಬಹುದಾದ ಕನ್ನಡ ತಂತ್ರಾಂಶವನ್ನು ರೂಪಿಸಲಾಯಿತು. ಈ ಯೋಜನೆಯನ್ನು ಕರ್ನಾಟಕ ಸರ್ಕಾರದ ಉದ್ಯಮವಾದ ಎಂ.ಎಸ್.ಐ.ಎಲ್. ಸಂಸ್ಥೆಯ ಸಹಕಾರದಿಂದ ಅನುಷ್ಠಾನಗೊಳಿಸಲಾಯಿತು. ಇದೀಗ ಸಮಗ್ರ ವಚನಸಾಹಿತ್ಯವನ್ನು ವಿಶ್ವದಾದ್ಯಂತ ಆಸಕ್ತ ಜನ ತಾವಿರುವಲ್ಲಿಯೇ ವೀಕ್ಷಿಸುವ, ಪಠ್ಯವನ್ನು ಉಚಿತವಾಗಿ ಪಡೆದುಕೊಳ್ಳುವ ಹಾಗೂ ಆಲಿಸುವ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿದೆ. ವಚನ ಸಾಹಿತ್ಯವನ್ನು ಹುಡುಕುವಿಕೆಯ ಸೌಲಭ್ಯದೊಂದಿಗೆ ಶ್ರವಣಮಾಧ್ಯಮವನ್ನು ಅಳವಡಿಸಿ, ಅಂತರ್ಜಾಲದ ಮೂಲಕ ಹೊರತರುತ್ತಿರುವುದು ಸರ್ಕಾರದ ಮತ್ತೊಂದು ಮೈಲಿಗಲ್ಲು.

 

      ಸಮಗ್ರ ವಚನ ಸಾಹಿತ್ಯದ ಯೋಜನೆಯಲ್ಲಿ ಸುಮಾರು 249 ಜನ ವಚನಕಾರರ, ಸುಮಾರು 21,674 ವಚನಗಳನ್ನು ಸಂಗ್ರಹಿಸಲಾಗಿದೆ. ಈ ಸಮಗ್ರ ಪಠ್ಯ ಹಾಗೂ ಅದರೊಂದಿಗೆ ಈ ವಚನಗಳಿಂದ ಆಯ್ದ 1000 ವಚನಗಳನ್ನು ವಿವಿಧ ಧಾಟಿಗಳಲ್ಲಿ ರಾಗ ಸಂಯೋಜಿಸಿ, ವಿವಿಧ ಗಾಯಕರಿಂದ ಹಾಡಿಸಿ, ಧ್ವನಿ ಮುದ್ರಿಸಿ, ಅಂತರ್ಜಾಲಕ್ಕೆ ಅಳವಡಿಸಲಾಗಿದೆ. ಹೀಗೆ ಬಹುಮಾಧ್ಯಮದಲ್ಲಿ ಸಮಗ್ರವಚನ ಸಾಹಿತ್ಯವನ್ನು ಹೊರತರುವ ಮೂಲಕ ಸಾಮಾನ್ಯ ಪ್ರಜೆ ಹಾಗೂ ಸಂಶೋಧನಾ ಪ್ರವೃತ್ತಿಯ ಸಂಶೋಧಕರು, ವಿದ್ವಾಂಸರು ತುಲನಾತ್ಮಕವಾಗಿ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ ಎಂಬುದು ನಮ್ಮ ಆಶಯ. ಅಲ್ಲದೆ ಸಂಪುಟಗಳು ಹೆಚ್ಚಿದಷ್ಟು ಅವುಗಳನ್ನು ಕೊಂಡೊಯ್ಯಲು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಕೈಅಳತೆಯ ಸಿ.ಡಿ. ಅನುಕೂಲಕರ. ಈ ನಿಟ್ಟಿನಲ್ಲಿಯೂ ಬಹುಮಾಧ್ಯಮ ಪ್ರಕಟಣೆಗಳು ಜನಾಕರ್ಷಕವಾಗಿವೆ.

 

      ಸಮಗ್ರ ವಚನಸಾಹಿತ್ಯದ ಬಹುಮಾಧ್ಯಮ ಯೋಜನೆಯು ಅನುಷ್ಠಾನಗೊಳ್ಳಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನೆರವಾದ ಎಲ್ಲ ವಿದ್ವಾಂಸರು, ವಚನಗಳಿಗೆ ಧ್ವನಿ ಸಂಯೋಜಿಸಿ ಹಾಡಿದ ಸಂಗೀತಗಾರರು, ತಂತ್ರಜ್ಞರು ಹಾಗೂ ತಾಂತ್ರಿಕ ಪರಿಣತಿ ಹೊಂದಿರುವ ಸಲಹೆಗಾರರು ಹೀಗೆ ಹಲವಾರು ಜನರು ನೆರವಾಗಿದ್ದಾರೆ. ಈ ಎಲ್ಲರ ಸಹಕಾರದೊಂದಿಗೆ ಈ ಯೋಜನೆ ಅನುಷ್ಠಾನಗೊಂಡಿದ್ದು, ಅವರೆಲ್ಲರಿಗೂ ಕೃತಜ್ಞತೆಗಳು. ವಿಶ್ವದಾದ್ಯಂತ ಇರುವ ಕನ್ನಡಿಗರು, ವಿದ್ವಾಂಸರು, ಸಂಶೋಧಕರು ಇದರ ಲಾಭ ಪಡೆದರೆ ನಮ್ಮ ಶ್ರಮ ಸಾರ್ಥಕ.

 

 

 

ದಿನಾಂಕ:01.03.2015                                                               ಶ್ರೀ ಕೆ. ಎ. ದಯಾನಂದ

ಬೆಂಗಳೂರು                                                                                   ನಿರ್ದೇಶಕರು

      ಕನ್ನಡ ಮತ್ತು ಸಂಸ್ಕೃತಿ ಇಲಾಖೆ

 

ಯೋಜನೆಯನ್ನು ಕುರಿತು

ಅನಾವರಣ

ಆಶಯ

ಸಾಧನೆ

ನಮ್ಮ ನುಡಿ

ಸಂಪಾದಕ ಮಂಡಳಿ

ಅಂತರಜಾಲ ತಾಣ ಕುರಿತು

ಸಂದೇಶ

ಹೊನ್ನುಡಿ

ಪ್ರಕಾಶಕರ ಮಾತು

ಕಠಿಣ ಶಬ್ದಗಳ ಅರ್ಥ

Copyright | Disclaimer | Privacy Policy | Contact us  

Powered by Department of Kannada and Culture