ಮಾರೇಶ್ವರೊಡೆಯರು
ಬಯಲೊಳಗಣ ರೂಪು, ರೂಪಿನೊಳಗಣ ಬಯಲು,
1281
ಬಯಲೊಳಗಣ ರೂಪು, ರೂಪಿನೊಳಗಣ ಬಯಲು,
ಉಭಯವ ವಿಚಾರಿಸಿ ನೋಡುವಲ್ಲಿ,
ಕುಂಭದೊಳಗೆ ನೀರ ತುಂಬಿ, ಸಿಂಧುವಿನೊಳಗೆ ಮುಳುಗಿಸಲಾಗಿ,
ಅದರೊಳಗೂ ನೀರು, ಹೊರಗೂ ನೀರು.
ಹೊರಗಣ ನೀರು ಒಳಗಾಯಿತ್ತು, ಒಳಗಣ ನೀರು ಹೊರಗಾಯಿತ್ತು.
ಕುಂಭದೊಳಗಣ ನೀರಂಗಕ್ಕೆ ಒಳಗೋ ಹೊರಗೋ ಎಂಬುದ ವಿಚಾರಿಸಿ ತಿಳಿದು,
ಅಂಗದ ಮೇಲಿಹ ಲಿಂಗ, ಲಿಂಗವ ಧರಿಸಿಹ ಅಂಗ,
ಆ ಅರುಹಿನ ಕುರುಹಿಂಗೆ ಒಳಗೋ ಹೊರಗೋ ಎಂಬುದ ವಿಚಾರಿಸಿ,
ಕರ್ಪುರದ ಹೊಗೆಯೊಳಗೆ ಉಭಯ ಬಯಲಾಗಿ,
ಮಡಕೆ ಉಳಿಯಿತ್ತದೇಕೆ ? ಘಟ ಉಳಿದು ಆತ್ಮ ಬಯಲಾಯಿತ್ತದೇಕೆ ?
ಉಭಯ ನಿರಂತವಾದಲ್ಲಿ, ಉರಿಯಿಂದ ಕರ್ಪುರ ನಷ್ಟ,
ಕರ್ಪುರದಿಂದ ಉರಿ ನಷ್ಟವಾದಂತೆ.
ಇಂತೀ ಉಭಯಸ್ಥಲದೊಳಗೆ ಅಂಗಲಿಂಗ, ಪ್ರಾಣಲಿಂಗ
ಉಭಯವನೊಂದು ಮಾಡಿ ತಿಳಿದು, ನಿಜದಲ್ಲಿ ನಿಂದಲಿಂಗಾಂಗಿಯ ಕೂಗಿನ ಕುಲವಿಲ್ಲ, ಮಹಾಮಹಿಮ ಮಾರೇಶ್ವರಾ


ಸಂಗೀತ ನಿರ್ದೇಶಕರು : ಶಂಕರ್ ಶಾನುಭಾಗ್
ಹಾಡಿದವರ ಹೆಸರು : ಶಂಕರ ಶಾನುಭಾಗ್
ರಾಗ : ಮಿಶ್ರ ಭೈರಾಗಿ
ತಾಳ : ದಾದರಾ
ಶೈಲಿ : ಸುಗಮ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಸಿತಾರ್ - ಸುಮಾರಾಣಿ
ತಬಲ - ಪ್ರವೀಣ್ ಡಿ ರಾವ್
ಮತ್ತು ಕೊಳಲು -
ರಿದಂ ಪ್ಯಾಡ್ - ಪದ್ಮನಾಭ ಕಾಮತ್.

ನಿರ್ಗಮನ