ಪ್ರಸ್ತಾವನೆ:
ವಚನಸಾಹಿತ್ಯವೆಂದಾಕ್ಷಣ ಪುರುಷರಲ್ಲಿ ಮೊದಲು ನೆನಪಾಗುವ ಹೆಸರು ಬಸವಣ್ಣನದು, ಸ್ತ್ರೀಯರಲ್ಲಿ ಮೊದಲು ನೆನಪಾಗುವ ಹೆಸರು ಅಕ್ಕಮಹಾದೇವಿಯದು. ಶರಣರ ಚರಿತ್ರೆಗೆ ಸಂಬಂಧಪಟ್ಟಂತೆ ಅನೇಕ ಅಸ್ಪಷ್ಟತೆಗಳು ಅಲ್ಲಲ್ಲಿ ಉಳಿದುಕೊಂಡಿದ್ದು, ಇದಕ್ಕೆ ಮಹಾದೇವಿಯಕ್ಕ ಹೊರತಾಗಿಲ್ಲ. 15ನೆಯ ಶತಮಾನದ ಪೂರ್ವದಲ್ಲಿ ಕಂಡು ಬರುವ ಅವಳ ಚರಿತ್ರೆ, ಆ ಬಳಿಕ ಪ್ರಭುದೇವರಂತೆ ವ್ಯತ್ಯಾಸಕ್ಕೆ ಗುರಿಯಾದಂತೆ ಕಾಣುತ್ತದೆ. ಈ ಕಾಲದಲ್ಲಿ ಮಹತ್ವ ಪಡೆದ ವಿರಕ್ತ ಸಂಪ್ರದಾಯ ವೈರಾಗ್ಯಕ್ಕೆ ಒಂದು ಕಡೆ ಪ್ರಭುವನ್ನು, ಇನ್ನೊಂದು ಕಡೆ ಮಹಾದೇವಿಯನ್ನು ಚಿತ್ರಿಸಲು ತೊಡಗಿದುದೆ ಇದಕ್ಕೆ ಕಾರಣವೆಂದು ತೋರುತ್ತದೆ. ಹೀಗಾಗಿ ಹರಿಹರನಲ್ಲಿ ಬರುವ ಇವಳ ಚರಿತ್ರೆ ಪ್ರಭುಲಿಂಗಲೀಲೆ ಮತ್ತು ಈ ಪರಂಪರೆಯ ಸಾಹಿತ್ಯಕೃತಿಗಳಲ್ಲಿ ವ್ಯತ್ಯಾಸ ರೂಪವನ್ನು ಪಡೆದಿದೆ.

ಕಾವ್ಯಗಳು ಒದಗಿಸುವ ಆಧಾರಗಳ ಮೇರೆಗೆ ಮಹಾದೇವಿಯ ಜನ್ಮಗ್ರಾಮ ಉಡುತಡಿ. ಇದನ್ನು ಇಂದಿನ ಉಡುಗಣಿಯೊಂದಿಗೆ ವಿದ್ವಾಂಸರು ಸಮೀಕರಿಸುತ್ತಾರೆ. ಬೇರೆ ಗ್ರಾಮಗಳ ಉಲ್ಲೇಖ ಒಂದೆರಡು ಕಡೆ ಬಂದರೂ ಅವು ಉಪೇಕ್ಷೆಗೆ ಯೋಗ್ಯವಾದವುಗಳೆಂದೇ ಹೇಳಬಹುದು. ಮಹಾದೇವಿಯ ತಂದೆ ನಿರ್ಮಲಶೆಟ್ಟಿ, ತಾಯಿ ಸುಮತಿ ಎಂದು ಕಾವ್ಯಗಳು ಹೇಳುತ್ತಲಿದ್ದರೂ ಇವು ಆ ಕಾಲದ, ಆ ಪರಿಸರದ ವ್ಯಕ್ತಿನಾಮಗಳಾಗಿ ತೋರುವುದಿಲ್ಲವಾದುದರಿಂದ, ಇವುಗಳನ್ನು ಕಲ್ಪಿತ ಹೆಸರುಗಳೆಂದೇ ಇಟ್ಟುಕೊಳ್ಳಬಹುದೇನೋ.

ಮಹಾದೇವಿಯ ಜೀವನದ ಮುಖ್ಯ ಘಟನೆಯೆಂದರೆ ರಾಜನಾದ ಕೌಶಿಕನ ವ್ಯಾಮೋಹಕ್ಕೆ ಆಕೆ ಗುರಿಯಾದುದು. ಈ ಕೌಶಿಕ ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗೆಯ ಹೆಸರು ಅಂದು ಪ್ರಚಾರದಲ್ಲಿರಲಿಲ್ಲವಾಗಿ ಇದನ್ನೂ ನಾವು ಕಲ್ಪಿತನಾಮವೆಂದು ಇಟ್ಟುಕೊಳ್ಳಬಹುದಾದರೂ ಇಂಥ ಒಂದು ಘಟನೆ ಅವಳ ಜೀವನದಲ್ಲಿ ಸಂಭವಿಸಿದುದು ಸತ್ಯವೆಂದು ತೋರುತ್ತದೆ. ಇದನ್ನು ಪೆÇೀಷಿಸುವ ಧ್ವನಿಗಳು ಅವಳ ವಚನಗಳಲ್ಲಿ ಕೇಳಿಸುತ್ತವೆ. ವಿದ್ವಾಂಸರು ಈ ಕೌಶಿಕನನ್ನು ಬಳ್ಳೆಗಾವಿ ಪರಿಸರದಲ್ಲಿ ಆಳುತ್ತಿದ್ದ ಕಸಪಯ್ಯನೊಂದಿಗೆ ಸಮೀಕರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಮಹಾದೇವಿಯ ಉಜ್ವಲ ಲಾವಣ್ಯಕ್ಕೆ ಮೋಹಿತನಾದ ಕೌಶಿಕ ಒತ್ತಾಯದಿಂದ ಅವಳನ್ನು ಅರಮನೆ ತುಂಬಿಸಿಕೊಂಡನೆಂದೂ, ತನ್ನ ಭಾಕ್ತಿಕಜೀವನಕ್ಕೆ ಅಡ್ಡಿಬರದಂತೆ ವರ್ತಿಸಬೇಕೆಂದು ಮಹಾದೇವಿ ಶರತ್ತು ಹಾಕಿದಳೆಂದೂ, ಆ ಶರತ್ತಿಗೆ ಕೌಶಿಕ ವ್ಯತಿರಿಕ್ತವಾಗಿ ನಡೆದುಕೊಂಡ ಕಾರಣ ಅವಳು ಅರಮನೆಯನ್ನು ತೊರೆದು ಮಲ್ಲಿಕಾರ್ಜುನ ಮೋಹಿತೆಯಾಗಿ ಹೊರಟಳೆಂದೂ ತಿಳಿದುಬರುತ್ತದೆ. ಈ ಸಂದರ್ಭದಲ್ಲಿ ಅವಳು ದಿಗಂಬರೆಯಾಗಿ ಹೊರಬಿದ್ದಳೆಂದು ಕಾವ್ಯಗಳು ಹೇಳುತ್ತವೆ. ವಿದ್ವಾಂಸರೂ ಇದನ್ನು ನಂಬಿದ್ದಾರೆ. ಆದರೆ ಮೂಲತಃ ಕೇಶಾಂಬರಿಯಾಗಿ ಅರಮನೆಯಿಂದ ಹೊರಬಿದ್ದಳೆಂದು ಕವಿಗಳು ಬರೆದಿರುವುದನ್ನು ಮುಂದಿನವರು ತಲೆಗೂದಲಿನಿಂದಲೇ ಮೈಮುಚ್ಚಿಕೊಂಡಳೆಂದು ಭಾವಿಸುತ್ತ ಬಂದಂತಿದೆ. ಇಲ್ಲಿ ಕೇಶಾಂಬರವೆಂದರೆ ಕೂದಲಿನ ಬಟ್ಟೆ (ಕಂಬಳಿ) ಎಂದೇ ಅರ್ಥವಿದೆಯೆಂದು ಇತ್ತೀಚಿನ ವಿದ್ವಾಂಸರು ಹೇಳುತ್ತಿರುವುದು ಸರಿಯೆಂದು ತೋರುತ್ತದೆ. ಕೊಂಡಗುಳಿ ಕೇಶಿರಾಜನೂ ಮಂತ್ರಿಪದವಿಯನ್ನು ಧಿಕ್ಕರಿಸಿದ ಸಂದರ್ಭದಲ್ಲಿ ದಿವ್ಯವಸ್ತ್ರಾಭರಣಗಳನ್ನು ಕಳಚಿ, ಕೇಶಾಂಬರನಾಗಿ ಹೊರಬಿದ್ದನೆಂದು ಹರಿಹರ ಹೇಳುತ್ತಾನೆ. ಇಲ್ಲಿ ಪುರುಷನಾದ ಕೇಶಿರಾಜ ಕಂಬಳಿಯನ್ನು ಹೊದ್ದುಕೊಂಡು ಹೋದನೆಂದೇ ಅರ್ಥಮಾಡಬೇಕಾಗುತ್ತದೆ. ಕಂಬಳಿಯು ವೈರಾಗ್ಯದ ಸಂಕೇತವೆಂದು ಈಗಲೂ ಜನಪದರು ನಂಬಿರುವದನ್ನು ಇಲ್ಲಿ ನೆನೆಯಬಹುದು. ಈ ಹಿನ್ನೆಲೆಯಲ್ಲಿ ಮಹಾದೇವಿಯಕ್ಕ ದಿಗಂಬರೆಯಾಗಿ ಹೊರಬಿದ್ದಳೆನ್ನುವುದಕ್ಕಿಂತ ಕಂಬಳಿಯನ್ನು ಹೊದ್ದು ಹೊರಟಳೆಂದು ಇಟ್ಟುಕೊಳ್ಳುವುದೇ ಸೂಕ್ತವೆಂದು ತೋರುತ್ತದೆ.

ಇದು ಅಕ್ಕನ ಜೀವನದಲ್ಲಿ ಒಂದು ಅಗ್ನಿದಿವ್ಯಘಟನೆ. ಆಕೆ ವಿಚಾರಸ್ವಾತಂತ್ರ್ಯದ ಮಹಿಳೆ. ಗಂಡ ಮತ್ತು ವಿಚಾರಸ್ವಾತಂತ್ರ್ಯ ಈ ಎರಡು ಆಯ್ಕೆಗಳು ಆಹ್ವಾನವಾದಾಗ ಗಂಡನನ್ನು ಧಿಕ್ಕರಿಸಿ ವಿಚಾರಸ್ವಾತಂತ್ರ್ಯವÀನ್ನು ಆಯ್ದುಕೊಂಡುದು ಲೋಕದ ಇತಿಹಾಸದಲ್ಲಿಯೇ ಅಪರೂಪದ ಘಟನೆಯಾಗಿದೆ.

ಅರಮನೆಯಿಂದ ಹೊರಬಿದ್ದ ಅಕ್ಕ ಮುಂದೆ ಬೇರೆ ಬೇರೆ ಒರೆಗಲ್ಲುಗಳಿಗೆ ವಸ್ತುವಾಗಿ ನಿಲ್ಲಬೇಕಾಯಿತು. ಅವಳ ಅನೇಕ ವಚನಗಳಲ್ಲಿ ಈ ಮಾತಿಗೆ ನಿದರ್ಶನಗಳು ದೊರೆಯುತ್ತವೆ. 'ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ್ಯ' 'ಚಂದನವ ಕಡಿದು ಕೊರೆದು ತೇದಡೆ ನೊಂದೆನೆಂದು ಕಂಪಬಿಟ್ಟಿತ್ತೆ' 'ಮನೆಮನೆದಪ್ಪದೆ ಕೈಯ್ಯೊಡ್ಡಿ ಬೇಡುವಂತೆ ಮಾಡಯ್ಯ,' 'ಹಸಿವಾದೊಡೆ ಊರೊಳಗೆ ಬಿsಕ್ಷಾನ್ನಗಳುಂಟು, ತೃಷೆಯಾದಡೆ ಕೆರೆ ಬಾವಿಗಳುಂಟು ಮೊದಲಾದ ವಚನಗಳಲ್ಲಿ ಈ ಅಂಶಗಳನ್ನು ಗುರುತಿಸಬಹುದಾಗಿದೆ. ತನ್ನ ಜೀವನದ ಉತ್ತರಾರ್ಧದಲ್ಲಿ ಅವಳು ಮಲ್ಲಿಕಾರ್ಜುನನ ವಶವರ್ತಿಯಾಗಿ ಲೋಕವನ್ನೆಲ್ಲ ಸುತ್ತಿ, ಕಲ್ಯಾಣವನ್ನು ಪ್ರವೇಶಿಸಿದ್ದು ಮತ್ತೊಂದು ಮುಖ್ಯ ಘಟನೆ. ಅನುಭವಮಂಟಪದಲ್ಲಿ ಅವಳು ಎದುರಿಸಿದ ಪ್ರಶ್ನೆ, ಕೊಟ್ಟ ಉತ್ತರಗಳು ಅವಳ ಚಿಂತನೆಯ ಔನ್ನತ್ಯವನ್ನು ಸಾರುತ್ತವೆ. ಅಲ್ಲಿ ಪ್ರಭುದೇವ, ಬಸವಣ್ಣ, ಚೆನ್ನಬಸವಣ್ಣ ಮೊದಲಾದ ಮಹಾತ್ಮರ ಮಧ್ಯ ಎದ್ದುಕಾಣುವಂತೆ ಬದುಕಿದ ಮಹಾದೇವಿ, ಅವಳೇ ಹೇಳುವಂತೆ 'ನಾಮದಲ್ಲಿ ಹೆಂಗೂಸೆಂಬ ಹೆಸರಾದಡೇನು ಭಾವಿಸಲು ಗಂಡುರೂಪ' ಎಂಬಂತೆ ವ್ಯಕ್ತಿತ್ವವನ್ನು ರೂಪಿಸಿಕೊಂಡಳು. ಮುಂದೆ ಕಲ್ಯಾಣವನ್ನು ಬಿಟ್ಟು ಕದಳಿಗೆ ಹೋದ ಬಳಿಕಿನ ಅವಳ ಜೀವನ ವಿವರಗಳು ಅಷ್ಟಾಗಿ ತಿಳಿದುಬಂದಿಲ್ಲ.

ಮಹಾದೇವಿಯಕ್ಕ ಒಬ್ಬ ಶ್ರೇಷ್ಠ ವಚನಕಾರ್ತಿ ಶ್ರೇಷ್ಠ ಕವಯಿತ್ರಿ. ಈಗ ಅವಳ 434 ವಚನಗಳು ಲಭ್ಯವಾಗಿವೆ. ಅವಳ ಜೀವನ ಸಾಧನೆಯ ಎಲ್ಲ ಹಂತದ ಭಾವಲಹರಿಗಳು ಅವುಗಳಲ್ಲಿ ಜೀವಂತ ಅಭಿವ್ಯಕ್ತಿಯನ್ನು ಪಡೆದಿವೆ. ಆಕೆಯ ಬರವಣಿಗೆ ಭಾವಗೀತಾತ್ಮಕವಾದುದು. ಜೀವನದ ನೋವು ನಲಿವು, ಆಧ್ಯಾತ್ಮಿಕ ನಿಲುವು ಅವಳ ಅಭಿವ್ಯಕ್ತಿಯ ವೈಶಿಷ್ಟ್ಯಗಳಾಗಿವೆ. ಶರಣಸತಿ ಲಿಂಗಪತಿ ಭಾವವನ್ನು ಸ್ಥಾಯಿಯಾಗಿ ಹಿಡಿದು ಬರೆದ ವಚನಗಳಲ್ಲಿ ಒಂದು ಬಗೆಯ ಔನ್ನತ್ಯವಿದ್ದರೆ, ಜೀವನದುದ್ದಕ್ಕೂ ಅನುಭವಿಸಿದ ಸಂಕಷ್ಟಗಳ ನಿರೂಪಣೆಯಲ್ಲಿ ಇನ್ನೊಂದು ಬಗೆಯ ಔನ್ನತ್ಯವನ್ನು ಕಾಣಬಹುದು. 'ಬೆಳದಿಂಗಳು ಬಿಸಿಲಾಯಿತ್ತು.' 'ಸುಡಲೀ ವಿರಹವ;' ನಾನಾರಿಗೆ ಧೃತಿಗೆಡುವೆ 'ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾú' ಮೊದಲಾದ ವಚನಗಳಲ್ಲಿ ಲಿಂಗವಿಕಳಾವಸ್ಥೆಯ ವಿವಿಧ ಪರಿಗಳನ್ನು ಕಾಣಬಹುದು. 'ವನವೆಲ್ಲ ನೀನೇ, ವನದೊಳಗಣ ದೇವತರುವೆಲ್ಲ ನೀನೇ' ಎಂಬಂಥ ವಚನಗಳು ಅವಳು ಸೃಷ್ಟಿಯಲ್ಲಿ ಅನುಭವಿಸಿದ ಶಿವದರ್ಶನಕ್ಕೆ ಸಾಕ್ಷಿಯಾಗಿವೆ.

ಯೋಗಾಂಗತ್ರಿವಿಧಿ, ಸ್ವರವಚನ, ಸೃಷ್ಟಿಯವಚನ, ಮಂತ್ರಗೋಪ್ಯಗಳೆಂಬ ಲಘುಕೃತಿಗಳನ್ನು ಬರೆದಿದ್ದರೂ ಅಕ್ಕನ ಅಂತರಂಗದರ್ಶನವಾಗುವುದು ಅವಳ ವಚನಗಳಲ್ಲಿ. ಭಾವತೀವ್ರತೆಯಿಂದ ಕೂಡಿರುವ ಅವುಗಳಿಗೆ ವಚನ ಸಾಹಿತ್ಯದಲ್ಲಿ ಎಲ್ಲ ದೃಷ್ಟಿಯಿಂದಲೂ ಪ್ರತ್ಯೇಕವಾದ ಸ್ಥಾನ ಸಲ್ಲುತ್ತದೆ. ಇದನ್ನು ಸಮಕಾಲೀನ ಶರಣರೇ ಗುರುತಿಸಿದ್ದರೆನ್ನುವುದಕ್ಕೆ' ಆದ್ಯರ ಅರುವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನ,

ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ,

ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ,

ಅಜಗಣ್ಣನ ಐದು ವಚನಕ್ಕೆ ಕೂಡಲಚೆನ್ನಸಂಗಮದೇವಾ

ಮಹದೇವಿಯಕ್ಕನ ಒಂದು ವಚನ ನಿರ್ವಚನ'

ಎಂಬ ಚನ್ನಬಸವಣ್ಣನ ಈ ವಚನ ಸಾಕ್ಷಿಯಾಗಿದೆ. 'ಮುತ್ತು ನೀರಲಾಯಿತ್ತು, ವಾರಿಕಲ್ಲು ನೀರಲಾಯಿತ್ತು, ಉಪ್ಪು ನೀರಲಾಯಿತ್ತು. ಉಪ್ಪ ಕರಗಿತ್ತು, ವಾರಿಕಲ್ಲು ಕರಗಿತ್ತು ಮುತ್ತು ಕರಗಿದುದನಾರೂ ಕಂಡವರಿಲ್ಲ' ಎಂಬ ಅವಳ ವಚನ, ಅವಳ ವ್ಯಕ್ತಿತ್ವಕ್ಕೆ ಬರೆದ ವ್ಯಾಖ್ಯಾನವಾಗಿದೆ.


ನಿರ್ಗಮನ