ಪರಿಷ್ಕರಣ:
ಈ ಸಂಪುಟದ ವಚನಗಳನ್ನು ಡಾ.ಆರ್.ಸಿ. ಹಿರೇಮಠ ಅವರು ಸಂಪಾದಿಸಿದ `ಶಿವಶರಣೆಯರ ವಚನಗಳು' ಸಮಗ್ರ ಸಂಪುಟ, ಬೇರೆ ಬೇರೆ ವಿದ್ವಾಂಸರು ಸಂಪಾದಿಸಿದ ಬಿಡಿಬಿಡಿ ಸಂಕಲನಗಳು ಮತ್ತು ಇದುವರೆಗೆ ದೊರೆತ ವಿವಿಧ ಸ್ಥಲಕಟ್ಟಿನ ಪ್ರಕಟಿತ ಅಪ್ರಕಟಿತ ಕೃತಿ ಹಾಗೂ ಹಸ್ತಪ್ರತಿಗಳ ಆಧಾರದಿಂದ ಪರಿಷ್ಕರಿಸಲಾಗಿದೆ. ಈ ಮೊದಲು ಪ್ರಕಟವಾದ ಸಂಕಲನಗಳಲ್ಲಿನ ಪುನರುಕ್ತ ವಚನಗಳನ್ನು ತೆಗೆದುಹಾಕುವುದು, ಪಾಠದೋಷಗಳನ್ನು ಹೊಸ ಆಕರಗಳ ಹಿನ್ನೆಲೆಯಲ್ಲಿ ನಿವಾರಿಸಿಕೊಳ್ಳುವುದು, ಹೆಚ್ಚಿಗೆ ದೊರೆತ ವಚನಗಳನ್ನು ಪರಿಷ್ಕರಿಸಿ ಸ್ವೀಕರಿಸುವುದು, ಆ ಮೂಲಕ ಇಂದಿನ ಮಿತಿಗೆ ಒಬ್ಬೊಬ್ಬ ಶರಣೆಯರ ವಚನಗಳ ಒಟ್ಟು ಮೊತ್ತವನ್ನು ನಿರ್ಧರಿಸುವುದು ಇದು ಇಲ್ಲಿ ಅನುಸರಿಸಿದ ಪರಿಷ್ಕರಣದ ವಿಧಾನ. ಈ ಕಾರ್ಯಕ್ಕೆ ತೊಡಗಿದಾಗ ಎದುರಾದ ಸಮಸ್ಯೆಗಳು, ಅವುಗಳನ್ನು ಪರಿಹರಿಸಿಕೊಂಡ ರೀತಿ ಹೀಗಿದೆ. ಅಂಕಿತ ಸಮಸ್ಯೆ ಹಲವು ವಿಧದ ಅಂಕಿತಗಳನ್ನು ಒಬ್ಬಳೇ ವಚನಕಾರ್ತಿ ಇಟ್ಟುಕೊಂಡಿರುವುದು, ಒಂದೇ ಅಂಕಿತವನ್ನು ಹಲವರು ಇಟ್ಟುಕೊಂಡಿರುವುದು ಶಿವಶರಣೆಯರ ವಚನಗಳಲ್ಲಿ ಕಂಡುಬರುವ ಒಂದು ವಿಶೇಷ.ಅಕ್ಕಮಹಾದೇವಿಯ ವಚನಗಳಲ್ಲಿ ಚೆನ್ನಮಲ್ಲಿಕಾರ್ಜುನ, ಶ್ರೀಶೈಲಮಲ್ಲಿಕಾರ್ಜುನ, ಶ್ರೀಗಿರಿಮಲ್ಲಿಕಾರ್ಜುನ, ಸದ್ಗುರುಮಲ್ಲಿಕಾರ್ಜುನ ಎಂಬ ನಾಲ್ಕು ವಿಧದ ಅಂಕಿತಗಳು ಕಂಡುಬರುತ್ತವೆ. ಇವುಗಳಲ್ಲಿ ಸದ್ಗುರುಮಲ್ಲಿಕಾರ್ಜುನ ಎಂಬುದು ಬೇರೊಬ್ಬರ ವಚನಾಂಕಿತವಾಗಿರಬಹುದು ಎಂದು ಆ ಅಂಕಿತಹೊಂದಿದ ವಚನಗಳ ವಸ್ತು, ಧೋರಣೆ, ನಿರೂಪಣೆಯ ಹಿನ್ನೆಲೆಯಲ್ಲಿ ನಿರ್ಧರಿಸಿ, ಅಂಥ ವಚನಗಳನ್ನು ಕೈಬಿಟ್ಟು ಉಳಿತ ಅಂಕಿತಗಳ ವಚನಗಳನ್ನು ಮಾತ್ರ ಸ್ವೀಕರಿಸಲಾಗಿದೆ.

ನೀಲಮ್ಮನ ಹೆಸರಿನಲ್ಲಿ ಮೂರು ವಿಧವಾದ ಅಂಕಿತಗಳು ದೊರೆಯುತ್ತವೆ. ಸಂಗಯ್ಯ, ಬಸವಪ್ರಿಯ ಕೂಡಲಸಂಗಮದೇವ, ಗೊಹೇಶ್ವರಲಿಂಗದಲ್ಲಿ ಪ್ರಭುವೆ ಸಾಕ್ಷಿಯಾಗಿ ಬಸವಪ್ರಿಯ ಕೂಡಲಸಂಗಮದೇವ. ಇವುಗಳಲ್ಲಿ ಎರಡನೆಯ ಅಂಕಿತ ಹೊಂದಿದ ವಚನಗಳು ಇದುವರೆಗೆ ದೊರೆತಿಲ್ಲ. ದೊರೆತಿರಬಹುದಾದ ವಚನಗಳು ನೀಲಮ್ಮನವಾಗಿರದೆ, ಅಂಕಿತ ಮಧ್ಯದ `ಚೆನ್ನ' ಪದವನ್ನು ಕಳೆದುಕೊಂಡ ಸಂಗಮೇಶ್ವರ ಅಪ್ಪಣ್ಣನ ವಚನಗಳಾಗಿರಬೇಕು. ಮೂರನೆಯ ಅಂಕಿತದ ವಚನಗಳಲ್ಲಿ ಪುರುಷ ಸಂಬೋಧನೆಯ ರೀತಿ ಕಂಡುಬರುವುದರಿಂದ ಅವುಗಳ ಕರ್ತೃ ಭಿನ್ನನೆಂದು ಹೇಳಬೇಕಾಗುತ್ತದೆ. ಇನ್ನು ಉಳಿದ 'ಸಂಗಯ್ಯ` ಎಂಬ ಅಂಕಿತ ಪ್ರಾಚೀನ ತಾಳೆಗರಿ ಹಸ್ತಪ್ರತಿಯಲ್ಲಿ ನೀಲಮ್ಮನ ಹೆಸರಿನಡಿಯಲ್ಲಿ ಸಂಗ್ರಹವಾದ ವಚನಗಳಲ್ಲಿ ನಿಯತವಾಗಿ ದೊರೆಯುತ್ತದೆ. ಈ ಕಾರಣದಿಂದ ಇದೇ ನೀಲಮ್ಮನ ನಿಜ ಅಂಕಿತವೆಂದು ಗಣಿಸಲಾಗಿದೆ.

`ನಿರ್ಲಜ್ಜೇಶ್ವರ' ಎಂಬ ಅಂಕಿತ ಸೂಳೆ ಸಂಕವ್ವೆ ಮತ್ತು ಕೊಟ್ಟದ ಸೋಮವ್ವೆ ಈ ಇಬ್ಬರ ವಚನಗಳಲ್ಲಿಯೂ ಕಂಡುಬರುತ್ತದೆ. ದೊರೆತ ಇವರ ಒಂದೊಂದೇ ವಚನದಲ್ಲಿ ಎರಡು ವಾಕ್ಯಗಳು ಸಮಾನವಾಗಿ ಉಳಿದೆರಡು ವಾಕ್ಯಗಳು ಮಾತ್ರ ಭಿನ್ನವಾಗಿವೆ. ಸಕಲ ಪುರಾತನರ ವಚನ ಕಟ್ಟುಗಳಲ್ಲಿ ಇಬ್ಬರೂ ಬೇರೆ ಬೇರೆ ಎಂಬಂತೆ ಸೂಚಿಸಿರುವುದರಿಂದ ಒಂದೆ ವಿಧವಾದ ಅಂಕಿತವನ್ನು ಇಟ್ಟುಕೊಂಡ ಭಿನ್ನ ವಚನಕಾರ್ತಿಯರೆಂದೇ ಇಲ್ಲಿ ಸ್ವೀಕರಿಸಲಾಗಿದೆ.

`ಅಮುಗೇಶ್ವರ` `ಅಮುಗೇಶ್ವರಲಿಂಗ` ಅಂಕಿತಗಳನ್ನು ಅಮುಗೆದೇವಯ್ಯಗಳ ಪುಣ್ಯಸ್ತ್ರೀ, ಅಮುಗೆರಾಯಮ್ಮ, ರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ರಾಯಮ್ಮ ಎಂಬ ಮೂವರು ವಚನಕಾರ್ತಿಯರಿಗೆ ಆರೋಪಿಸಲಾಗಿದೆ. ಮೊದಲನೆಯ ಮತ್ತು ಮೂರನೆಯ ವಚನಕಾರ್ತೆಯರ ಹೆಸರಿನಡಿಯಲ್ಲಿ ಒಂದೊಂದೇ ವಚನ ದೊರೆತಿದ್ದು, ಅವುಗಳಲ್ಲಿ ಆರಂಭದ ಎರಡು ಸಾಲಿನ ಒಂದು ವಾಕ್ಯ ಮಾತ್ರ ವ್ಯತ್ಯಾಸವಿದ್ದು ಉಳಿದುದೆಲ್ಲ ಒಂದೇ ಆಗಿದೆ. ಎರಡನೆಯ ವಚನಕಾರ್ತಿಯ ಹೆಸರಿನಡಿಯಲ್ಲಿ 115 ವಚನಗಳು ಸಂಗ್ರಹವಾಗಿದ್ದು, ಅದರಲ್ಲಿ ಈ ವಚನವೂ ಒಂದಾಗಿದೆ. ಇದರಿಂದ ಈ ಅಂಕಿತದ ವಚನಗಳ ಕರ್ತೃಗಳು ಮೂವರಲ್ಲ, ಇಬ್ಬರು ಎಂದು ಹೇಳಬೇಕಾಗುತ್ತದೆ. ಅಮುಗೆದೇವಯ್ಯಗಳ ಪುಣ್ಯಸ್ತ್ರೀ ಮತ್ತು ಅಮುಗೆರಾಯಮ್ಮ ಇಬ್ಬರೂ ಒಂದೇ. ರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ರಾಯಮ್ಮ ಇವರಿಂದ ಭಿನ್ನಳು. ಕೊಟ್ಟಣದ ಸೋಮವ್ವೆ, ಸೂಳೆಸಂಕವ್ವೆಯರಂತೆ ಈ ಇಬ್ಬರೂ ಒಂದೇ ವಿಧವಾದ ಅಂಕಿತವನ್ನು ಇಟ್ಟುಕೊಂಡು ಒಂದೇ ವಚನವನ್ನು ಸ್ವಲ್ಪ ವ್ಯತ್ಯಾಸಗೊಳಿಸಿ ರಚಿಸಿದಂತೆ ತೋರುತ್ತದೆ. ಕದಿರೆ ರೆಮ್ಮವ್ವೆ ಮತ್ತು ಕದಿರ ಕಾಯಕದ ಕಾಳವ್ವೆಯರ ಅಂಕಿತಗಳಲ್ಲಿಯೂ ಗುಮ್ಮೇಶ್ವರ ಎಂಬುದು ಸಮಾನವಾಗಿದ್ದು, `ಕದಿರೆಮ್ಮಿಯೊಡೆಯ` ಎಂಬ ವಿಶೇಷಣ ಎರಡೂ ಭಿನ್ನವೆಂದು ಗಣಿಸಲು ಕಾರಣವಾಗಿದೆ.

`ಷಟ್ಪ್ರಕಾರ ಸಂಗ್ರಹ` ಎಂಬ ಸ್ಥಲಕಟ್ಟಿನ ವಚನಸಂಕಲನದಲ್ಲಿ `ಎನ್ನಯ್ಯಪ್ರಿಯ ಚೆನ್ನರಾಮ್ಬ ಎಂಬ ಅಂಕಿತದ ಒಂದು ವಚನವಿದ್ದು, ಅದನ್ನು ಸಂಪಾದಕರು ಏಕಾಂತರಾಮಯ್ಯನ ಪುಣ್ಯಸ್ತ್ರೀಯದೆಂದು (ಏಕಾಂತ ರಾಮಯ್ಯನ ಅಂಕಿತ `ಎನ್ನಯ್ಯ ಚೆನ್ನರಾಮ' ಇರುವುದನ್ನು ಗಮನಿಸಿ)

ಕಲ್ಪಿಸಿದ್ದಾರೆ. ಆದರೆ ಇದು ಈಗಾಗಲೇ ಪ್ರಕಟವಾದ ಏಕಾಂತರಾಮಯ್ಯನ ವಚನವೇ ಆಗಿದ್ದು, ಈ ಸಂಕಲನದಲ್ಲಿ ಮಾತ್ರ ಅಂಕಿತ ಮಧ್ಯದಲ್ಲಿ `ಪ್ರಿಯ' ಎಂಬ ಪದ ಹೆಚ್ಚಿಗೆ ಸೇರಿಕೊಂಡು ಅವನ ಸತಿಯದಿರಬೇಕೆಂದು ಊಹಿಸಲು ಕಾರಣವಾಗಿದೆ. ಹೀಗಾಗಿ ಇಲ್ಲಿ ಇದನ್ನು ಗಣನೆಗೆ ತೆಗೆದುಕೊಂಡಿಲ್ಲ.

`ಶೀಲಸಂಪಾದನೆ' ಎಂಬ ಇನ್ನೊಂದು ಸ್ಥಲಕಟ್ಟಿನ ವಚನ ಸಂಕಲನದಲ್ಲಿ ಉರಿಲಿಂಗ ಪೆದ್ದಿಯ ಪುಣ್ಯಸ್ತ್ರೀ ಕಾಳವ್ವೆಯ ಒಂದು ವಚನ ಅಕ್ಕಮ್ಮನ ಅಂಕಿತದಲ್ಲಿಯೂ ದೊರೆಯುತ್ತದೆ. ಅದನ್ನು ಕಾಳವ್ವೆಗೆ ವರ್ಗಾಯಿಸಲಾಗಿದೆ.

ಇತರ ಸಂಗತಿಗಳು ಇದು ಜನಪ್ರಿಯ ಆವೃತ್ತಿಯಾಗಿರುವುದರಿಂದ ಪಾಠಾಂತರ ಸೂಚಿಸಿಲ್ಲ, ಊಹಿತ ಪಾಠವನ್ನು ಚೌಕ ಕಂಸಿನಲ್ಲಿ ಕೊಡಲಾಗಿದೆ. ವಚನಕಾರ್ತಿಯರ ಹೆಸರನ್ನು ವಿಶೇಷಣ ಸಹಿತವಾಗಿ ಅಕಾರಾದಿಯಲ್ಲಿ ಜೋಡಿಸಲಾಗಿದೆ. ಹಡಪದಪ್ಪಣ್ಣನ ಪುಣ್ಯಸ್ತ್ರೀಯ ವಚನಗಳು ಮಾತ್ರ ತಾತ್ವಿಕ ಹಿನ್ನೆಲೆಯಲ್ಲಿ ಜೋಡಣೆಗೊಂಡು ಪ್ರಾಚೀನ ಹಸ್ತಪ್ರತಿಗಳಲ್ಲಿ ದೊರೆಯುವುದರಿಂದ ಅವುಗಳನ್ನು ಮೂಲದಲ್ಲಿದ್ದಂತೆಯೇ ಇಟ್ಟುಕೊಂಡು, ಹಾಗೆ ಯಾವುದೇ ವ್ಯವಸ್ಥೆಗೆ ಒಳಗಾಗದೆ ಬೇರೆ ಬೇರೆ ಸಂಕಲನಗಳಲ್ಲಿ ಬಿಡಿಬಿಡಿಯಾಗಿ ದೊರೆಯುವ ಇತರ ಶರಣೆಯರ ವಚನಗಳನ್ನು ಅಕಾರಾದಿಯಾಗಿ ಜೋಡಿಸಲಾಗಿದೆ. ಹಡಪದಪ್ಪಣ್ಣನ ಪುಣ್ಯಸ್ತ್ರೀಯ ವಚನಗಳ ಅಕಾರಾದಿಯನ್ನು ಮಾತ್ರ ಅನುಬಂಧದಲ್ಲಿ ಕೊಡಲಾಗಿದೆ. ಜೊತೆಗೆ ಕಠಿಣಪದಕೋಶವನ್ನು ಈ ಸಂಪುಟದ ವಚನಗಳನ್ನು ಪರಿಷ್ಕರಿಸಲು ಬಳಸಿಕೊಂಡ ಆಕರಗ್ರಂಥಗಳ ಸೂಚಿಯನ್ನು ಸೇರಿಸಲಾಗಿದೆ.

ಮರುಪರಿಷ್ಕರಣ

ಈ ಆವೃತ್ತಿಯ ವಚನಗಳನ್ನು ಹೊಸದಾಗಿ ದೊರೆತ ಹೆಚ್ಚಿನ ಆಕರಗಳು ಮತ್ತು ವಿದ್ವಾಂಸರು ಸೂಚಿಸಿದ ತಿದ್ದುಪಡಿ, ಸಲಹೆ ಸೂಚನೆಗಳ ಹಿನ್ನೆಲೆಯಲ್ಲಿ ಮರುಪರಿಷ್ಕರಣ ಮಾಡಲಾಗಿದೆ. ಅದರಿಂದಾಗಿ ಕೆಳಗಿನಂತೆ ಬದಲಾವಣೆಗಳು ಉಂಟಾಗಿವೆ

1. ಮೊದಲ ಆವೃತ್ತಿಯಲ್ಲಿ ಒಟ್ಟು ವಚನಗಳ ಸಂಖ್ಯೆ 1105 ಇದ್ದರೆ, ಇಲ್ಲಿ ಅದು 1351 ಕ್ಕೆ ಏರಿದೆ. ವಚನಕಾರ್ತಿಯರ ಸಂಖ್ಯೆ 33 ರಿಂದ 35 ಕ್ಕೆ ಹೆಚ್ಚಿದೆ.

2. ಮೊದಲ ಆವೃತ್ತಿಯಲ್ಲಿ ಅಕ್ಕಮಹಾದೇವಿಯ 3 ವಚನಗಳು (ಕ್ರ.ಸಂ. 246, 293, 311), ಸತ್ಯಕ್ಕನ 2 ವಚನಗಳು (972, 983), ನಾಗಲಾಂಬಿಕೆಯ 1 ವಚನ (206) ಪುನರುಕ್ತವಾಗಿವೆ. ಈ 6 ವಚನಗಳನ್ನು ತೆಗೆದುಹಾಕಲಾಗಿ, ಮೊದಲ ಆವೃತ್ತಿಯಲ್ಲಿ ಉಳಿದ ಒಟ್ಟು ವಚನಗಳ ಸಂಖ್ಯೆ 1099 ಆಗುತ್ತದೆ.

3. ಈ ಆವೃತ್ತಿಯಲ್ಲಿ ಹೊಸದಾಗಿ ದೊರೆತ 248 ವಚನಗಳನ್ನು ಹೆಚ್ಚಿಗೆ ಸೇರಿಸಲಾಗಿದೆ. ಅವುಗಳಲ್ಲಿ ಅಕ್ಕಮಹಾದೇವಿಯ 82 ವಚನಗಳು, ನೀಲಮ್ಮನ 161 ವಚನಗಳು, ಅಮುಗೆರಾಯಮ್ಮ, ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ, ಮೋಳಿಗೆ ಮಹಾದೇವಿ ಮತ್ತು ಹಡಪದ ಲಿಂಗಮ್ಮನ ಒಂದೊಂದು ವಚನ, ಅe್ಞÁತ ಶಿವಶರಣೆಯರ ಎರಡು ವಚನಗಳು ಸಮಾವೇಶಗೊಂಡಿವೆ.

4. ತುಮಕೂರಿನ ಶ್ರೀ ಎಂ.ಚಂದ್ರಪ್ಪನವರು ಗುರುತಿಸಿದ ಪುನರುಕ್ತಿ, ಪಾದಸಾಮ್ಯ, ಭಾವಸಾಮ್ಯದ ವಚನಗಳಲ್ಲಿ ಸಂಪೂರ್ಣ ಪುನರುಕ್ತಿಯಾದವುಗಳನ್ನು ಮಾತ್ರ ತೆಗೆದು ಹಾಕಿ ಪಾದಸಾಮ್ಯ, ಭಾವಸಾಮ್ಯದ ವಚನಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.

5. ಒಂದೇ ವಚನ ಇಬ್ಬರ ಹೆಸರಿನಲ್ಲಿ ಬಂದಾಗ ಅದರ ಕರ್ತೃತ್ವವನ್ನು ನಿರ್ಧರಿಸುವಲ್ಲಿ ವಚನದ ಭಾವ, ಶಿಲ್ಪ, ವಸ್ತು, ಶೈಲಿ ಇತ್ಯಾದಿಗಳನ್ನು ಗಮನಿಸಲಾಗಿದೆ. ಹಾಗೆ ಬೇರೆಯವರಿಗೆ ಕೊಟ್ಟ ವಚನಗಳಲ್ಲಿ ಅಕ್ಕಮಹಾದೇವಿಯ ಒಂದು ವಚನ ಚೆನ್ನಬಸವಣ್ಣನಿಗೆ (311), ಸತ್ಯಕ್ಕನ ಒಂದು ವಚನ ಬಸವಣ್ಣನಿಗೆ (972) ಸೇರಿವೆ. ಚೆನ್ನಬಸವಣ್ಣ ಮತ್ತು ಘಟ್ಟಿವಾಳಯ್ಯ ಇಬ್ಬರಲ್ಲಿಯೂ ಬಂದ 292ನೆಯ ವಚನ (ಲಿಂಗವೆನ್ನೆ.....) ಅಕ್ಕಮಹಾದೇವಿಯ ರಚನೆಗಳನ್ನು ಹೆಚ್ಚುಮಟ್ಟಿಗೆ ಹೋಲುವುದರಿಂದ ಅದನ್ನು ಇಲ್ಲಿಯೇ ಉಳಿಸಿಕೊಳ್ಳಲಾಗಿದೆ. ಅಕ್ಕಮ್ಮನ 385ನೆಯ ವಚನ ಏಲೇಶ್ವರ ಕೇತಯ್ಯನಲ್ಲಿಯೂ ಬಂದಿದ್ದು (ಸಂ. 6. ವಚನ 1677), ಮೊದಲ ಐದುಪಾದ ಇಬ್ಬರಲ್ಲಿಯೂ ಒಂದೇ ಆಗಿವೆ. ಅಕ್ಕಮ್ಮನಲ್ಲಿ ಮುಂದೆ ನಾಲ್ಕು ಪಾದಗಳು ಹೆಚ್ಚಿಗೆ ಇವೆ. ಈ ವಚನ ಅಕ್ಕಮ್ಮನ ರಚನೆಗಳನ್ನು ಹೆಚ್ಚುಮಟ್ಟಿಗೆ ಹೋಲುವುದರಿಂದ ಇಲ್ಲಿಯೇ ಉಳಿಸಿಕೊಳ್ಳಲಾಗಿದೆ.6. ಪರಿಶಿಷ್ಟದಲ್ಲಿ ಕೊಟ್ಟಿದ್ದ ಅಕ್ಕಮಹಾದೇವಿಯ ಎರಡು ವಚನ, ಅಕ್ಕಮ್ಮನ ಒಂದು ವಚನ ಮತ್ತು ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮನ ಎರಡು ವಚನಗಳನ್ನು ಅವರವರ ವಚನಗಳಲ್ಲಿ ಅಕಾರಾದಿಗನುಗುಣವಾಗಿ ಅಳವಡಿಸಿಕೊಳ್ಳಲಾಗಿದೆ. 7. ಮೊದಲ ಆವೃತ್ತಿಯಲ್ಲಿ ಅಕ್ಕಮಹಾದೇವಿಯ 351 ನೆಯ ವಚನದ ಆರಂಭದ ನಾಲ್ಕು ಸಾಲು ಬಿಟ್ಟು ಹೋಗಿದ್ದವು. ಅವುಗಳನ್ನು ಶರಣಚಾರಿತ್ರದ ವಚನಗಳು ಸಂಕಲನಗ್ರಂಥದ 9 ನೆಯ ವಚನದಿಂದ ಪೂರ್ಣಗೊಳಿಸಿಕೊಂಡು ಅಕಾರಾದಿಗನು ಗುಣವಾಗಿ ಜೋಡಿಸಲಾಗಿದೆ (221). ಹಾಗೆಯೇ ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆಯ 651 ನೆಯ ವಚನದ ಆದಿಭಾಗ ಬಿಟ್ಟುಹೋಗಿದ್ದು, ಅದನ್ನು ಎಸ್.ಶಿವಣ್ಣನವರು ಸಾಧನೆ (4-4, 1975) ಪತ್ರಿಕೆಯಲ್ಲಿ ಪ್ರಕಟಿಸಿದ ವಚನದಿಂದ ಪೂರ್ಣಗೊಳಿಸಿಕೊಂಡು ಅಕಾರಾದಿ ಕ್ರಮದಲ್ಲಿ ಜೋಡಿಸಿಕೊಳ್ಳಲಾಗಿದೆ. 8. ಒಪೆÇ್ಪೀಲೆಯಲ್ಲಿಯ ತಿದ್ದುಪಡಿಗಳನ್ನು ಸರಿಪಡಿಸಿಕೊಳ್ಳಲಾಗಿದೆ.9. ಆಕರ ಸೂಚಿಯಲ್ಲಿ ಹೊಸದಾಗಿ ದೊರೆತ ವಚನಗಳ ಆಕರಗ್ರಂಥ, ಹಸ್ತಪ್ರತಿ, ಪತ್ರಿಕೆಗಳ ಹೆಸರುಗಳನ್ನು ಸೇರಿಸಿಕೊಳ್ಳಲಾಗಿದೆ.10. ಪ್ರಸ್ತಾವನೆಯನ್ನು ಕೆಲವು ತಿದ್ದುಪಡಿಗಳೊಂದಿಗೆ ಹಾಗೆಯೇ ಉಳಿಸಿಕೊಳ್ಳಲಾಗಿದೆ. 'ಪರಿಷ್ಕರಣ' ಎಂಬ ಭಾಗದಲ್ಲಿ ಕೆಲವು ಪ್ಯಾರಾ ತೆಗೆದು ಮರುಪರಿಷ್ಕರಣದ ಈ ವಿಷಯವನ್ನು ಜೋಡಿಸಲಾಗಿದೆ.ನಿರ್ಗಮನ