ಪ್ರಸ್ತಾವನೆ:
`ಯೋಗಿಗಳ ಯೋಗಿ ಶಿವಯೋಗಿ ಸೊಡ್ಡಳ ಸಿದ್ಧರಾಮನೊಬ್ಬನೆ ಯೋಗಿ' ಸೊಡ್ಡಳ ಬಾಚರಸನು ಶಿವಯೋಗಿ ಸಿದ್ಧರಾಮನನ್ನು ಹೀಗೆ ಹೊಗಳಿರುವನು. ಒಂದು ಕುಗ್ರಾಮವಾಗಿದ್ದ ಸೊನ್ನಲಿಗೆಯನ್ನು ಪ್ರಸಿದ್ಧ ಪಟ್ಟಣವಾಗಿ `ಭೂಕೈಲಾಸ'ವಾಗಿ ಕಟ್ಟಿ ಬೆಳೆಸಿದ ಮಹಾನ್ ಕನಸುಗಾರ

`ಶಿಲ್ಪಿ' ಸಿದ್ಧರಾಮ. ಅವನು ಬರಿಯ ಕನಸುಗಾರನಾಗಿರದೆ ಕರ್ತವ್ಯಶಾಲಿಯಾಗಿ ತನ್ನ ಆದರ್ಶಗಳನ್ನು ವಾಸ್ತವವಾಗಿಸಿದನು. `ಶಿವಯೋಗಿಯ ಶರೀರಂ ವೃಥಾ ಸವೆಯಲಾಗದು ಅನುಗೊಂಬನಿತು ಕಾಯಕಂ ನಡೆಯುತಿರಬೇಕು' ಎಂಬುದು ಸಿದ್ಧರಾಮನ ಬದುಕಿನ ನಿತ್ಯಮಂತ್ರ. ಇದು ಸಂಕಲ್ಪವಾಗಿ ಅನೇಕ ಸಮಾಜೋಧಾರ್ಮಿಕ ಚಟುವಟಿಕೆಗಳಿಗೆ ಹಾದಿಮಾಡಿಕೊಟ್ಟಿರಬಹುದು. ಇದರಿಂದಾಗಿ ಜನಪ್ರಿಯತೆಯ ಉತ್ತುಂಗ ಶಿಖರಕ್ಕೆ ಏರಿದ ಅವನು ಸಹಜವಾಗಿ ರಾಜಪೂಜಿತನಾದನು. ಸೊನ್ನಲಿಗೆಯಲ್ಲಿ ಕಪಿಲಸಿದ್ಧ ಮಲ್ಲಿಕಾರ್ಜುನನ ಲಿಂಗವನ್ನು ಸ್ಥಾಪಿಸಿ ದೇವಾಲಯ ನಿರ್ಮಾಣಮಾಡಿ ಅಲ್ಲಿ ಸಾಂಗವಾಗಿ ಲಿಂಗಾಭಿಷೇಕ, ಯೋಗಮಜ್ಜನ, ಅಭಿಷೇಕ, ನೈವೇದ್ಯ ಸಮರ್ಪಣೆ, ದಾನ ವಿನಿಯೋಗ, ಉತ್ಸವ, ಹೋಮ ಹವನಗಳು ನೆರವೇರಿಸುತ್ತಿರುವಾಗ ಈ ಎಲ್ಲ ಕಾರ್ಯಗಳಿಂದ ಪ್ರಭಾವಿತರಾದ, ಸಿದ್ಧರಾಮನ ಅಲೌಕಿಕ ಶಕ್ತಿಗೆ ಬೆರಗಾದ ನಾಡಿನ ಬೇರೆ ಬೇರೆ ಭಾಗದ ಜನತೆ ಈ ದೇವರಿಗೆ ದಾನದತ್ತಿಗಳನ್ನು ಬಿಟ್ಟ ಬಗೆಗೆ ಅನೇಕ ಶಾಸನಗಳು ದೊರೆಯುತ್ತವೆ. ಈ ವೇಳೆಗಾಗಲೇ ಸಿದ್ಧರಾಮನು ಪ್ರಸಿದ್ಧನಾಗಿದ್ದನೆಂಬುದನ್ನು ಶಾಸನಗಳು ತಿಳಿಸುತ್ತವೆ. ಸಿದ್ಧರಾಮನ ಪ್ರಸಿದ್ಧಿಯ ಪ್ರಯೋಜನ ಪಡೆದುಕೊಳ್ಳುವ ಪ್ರಯತ್ನ ಕರ್ಣದೇವನಿಂದಾಯಿತೆಂಬುದನ್ನು ರಾಘವಾಂಕ ತನ್ನ `ಸಿದ್ಧರಾಮ ಚಾರಿತ್ರ'ದಲ್ಲಿ ಹೇಳಿರುವನು. ಚಕ್ರವರ್ತಿಯಾಗುವ ಹಾಗೂ ಅದರಿಂದ ಬರುವ ರಾಜಕೀಯ ಲಾಭಕ್ಕಾಗಿ ಸಿದ್ಧರಾಮನ ಪ್ರಸಿದ್ಧಿಯನ್ನು ಬಳಸಿಕೊಳ್ಳ ಹೊರಟ ತಂತ್ರವೇ ಸಿದ್ಧರಾಮನು ಜನಮನದಲ್ಲಿ ಆರಾಧ್ಯಮೂರ್ತಿಯಾಗಿದ್ದ-ನೆಂಬುದನ್ನು ಸ್ಪಷ್ಟಪಡಿಸುತ್ತದೆ.

`ಅರುವತ್ತೆಂಟು ಸಾವಿರ ವಚನಂಗಳ ಹಾಡಿ ಹಾಡಿ ಸೋತಿತ್ತೆನ್ನ ಮನ...' ಎಂದು ಸಿದ್ಧರಾಮನೇ ತನ್ನ ವಚನವೊಂದರಲ್ಲಿ ಹೇಳಿಕೊಂಡಿರುವನು. ಇಷ್ಟು ದೊಡ್ಡ ಪ್ರಮಾಣದಲ್ಲಿ ವಚನಗಳನ್ನು ಬರೆರುವ ಬಗೆಗೆ ಸಂದೇಹವಿದೆ. ಅವನ ವಚನಗಳಲ್ಲಿ ಸುಪರಿಚಿತವಾದ ಅಂಕಿತ `ಕಪಿಲಸಿದ್ಧ

ಮಲ್ಲಿಕಾರ್ಜುನ' `ಅಥವಾ `ಕಪಿಲಸಿದ್ಧಮಲ್ಲಿನಾಥಾ'. ಇವಲ್ಲದೆ `ಕಪಿಲಸಿದ್ಧ ಮಲ್ಲೇಶ್ವರಾ', `ಕಪಿಲಸಿದ್ಧಮಲ್ಲೇಶ್ವರ ದೇವರು'; `ಕಪಿಲಸಿದ್ಧಮಲ್ಲೇಶ'; `ಕಪಿಲಸಿದ್ಧಮಲ್ಲಿಕಾರ್ಜುನಂಗ'; `ಕಪಿಲಸಿದ್ಧಮಲ್ಲ' -ಈ ಅಂಕಿತಗಳೂ ಕಾಣಬರುತ್ತವೆ. ಒಂದೆರಡು ಕಡೆ `ವಿಚಿತ್ರಮೂಲ ಕಪಿಲಸಿದ್ಧ ಮಲ್ಲಿಕಾರ್ಜುನ' ಎಂಬ ಅಂಕಿತವೂ ದೊರೆಯುತ್ತದೆ. ಇತ್ತೀಚೆಗೆ ಚಿತ್ರದುರ್ಗದ ಬೃಹನ್ಮಠದಲ್ಲಿ ದೊರೆತ ಓಲೆ ಪ್ರತಿಯೊಂದರಲ್ಲಿ `ಕಪಿಲಸಿದ್ಧ ಮಲ್ಲಿಕಾರ್ಜುನ' `ಕವಿಲಸಿದ್ಧಮಲ್ಲಿಕಾರ್ಜುಲಿಂಗ' `ಕಪಿಲಸಿದ್ಧ ಮಲ್ಲೇಶ್ವರ' `ಕಪಿಲಸಿದ್ಧಮಲ್ಲಿನಾಥಯ್ಯಾ' ಎಂಬ ಅಂಕಿತಗಳೂ ಬಳಕೆಯಾಗಿರುವುದು ಕಂಡುಬಂದಿದೆ. ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕು ಹೊನ್ನವಳ್ಳಿ ಗ್ರಾಮದ ಶ್ರೀ ಕರಿಸಿದ್ಧದೇವರ ಮಠದಲ್ಲಿ ಡಾ. ಎಂ.ಎಂ. ಕಲಬುರ್ಗಿ ಹಾಗೂ ಡಾ. ಸಾ.ಶಿ. ಮರುಳಯ್ಯನವರಿಗೆ ದೊರೆತ ಅಪರೂಪದ ಆರುಸಾವಿರ ವಚನಗಳ ಕಟ್ಟಿನಲ್ಲಿ `ಯೋಗಿನಾಥ' ಅಂಕಿತದ ಅನೇಕ ವಚನಗಳು ಕಾಣಬರುತ್ತವೆ. ಶ್ರೀ ಎಸ್. ಶಿವಣ್ಣನವರು ಸಂಪಾಸಿದ ಮುತ್ತಿನಪೆಂಡೆಯ ಓದುವ ಅನ್ನದಾನಿದೇವರು ಸಂಕಲಿಸಿದ `ಸಿದ್ಧರಾಮಯ್ಯನ ಶಿವಯೋಗ ಷಟ್‍ಸ್ಥಲಾನುಭಾವದ ವಚನ' ಕೃತಿಯಲ್ಲಿ ಯೋಗಿನಾಥ ಅಂಕಿತದ ಅನೇಕ ವಚನಗಳು ಸಿಗುತ್ತವೆ. ಎರಡು ವಿಭಿನ್ನ ಅಂಕಿತಗಳನ್ನು ಸಿದ್ಧರಾಮ ತನ್ನ ವಚನಗಳಲ್ಲಿ ಬಳಸಿರುವ ಬಗೆಗೆ ಬಹುಶಃ ಹೀಗೆ ವಿಚಾರಮಾಡಬಹುದೊ ಏನೋ :ಸಿದ್ಧರಾಮನೇ ತನ್ನ ವಚನವೊಂದರಲ್ಲಿ `ಭಕ್ತನಾದೊಡೆ ಬಸವಣ್ಣನಂತಾಗಬೇಕು; ಜಂಗಮವಾದಡೆ ಪ್ರಭುವಿನಂತಾಗಬೇಕು ಭೋಗಿಯಾದೆಡೆ ನಮ್ಮ ಗುರು ಚನ್ನಬಸವಣ್ಣನಂತಾಗಬೇಕು; ಯೋಗಿಯಾದಡೆ ನನ್ನಂತಾಗಬೇಕು ನೋಡಯ್ಯಾ......' ಎಂದಿರುವನು. ಸಿದ್ಧರಾಮ ಆಧ್ಯಾತ್ಮ್ಮಕವಾಗಿ ಬೆಳೆದಂತೆ, ಕಲ್ಯಾಣದಲ್ಲಿ ಪ್ರಭು ಬಸವ ಚನ್ನಬಸವ ಮೊದಲಾದ ಶರಣರ ಸಂಪರ್ಕಕ್ಕೆ ಬಂದ ಮೇಲೆ `ಯೋಗಿನಾಥಾ' ಎಂಬ ಅಂಕಿತವನ್ನು ಬಳಸಿರಬಹುದು. ಅವನ ಸಂಕೀರ್ಣ ತ್ರಿವಿಧಿ, ಬಸವ ಸ್ತೋತ್ರದ ತ್ರಿವಿಧಿ, ಅಷ್ಟಾವರಣ ಸ್ತೋತ್ರದ ತ್ರಿವಿಧಿಗಳಲ್ಲಿ ಯೋಗಿನಾಥಾಂಕಿತವನ್ನು ಕಾಣುತ್ತೇವೆ.

ಧೂಳಿಮಾಕಾಳನೆನ್ನುವ ದನಕಾಯುವ ಮುಗ್ಧ ಹುಡುಗನೋರ್ವ ಆದರ್ಶ ಶಿವಯೋಗಿಯಾದುದು; ಒಂದು ಕುಗ್ರಾಮವಾಗಿದ್ದ ಸೊನ್ನಲಿಗೆ ಪ್ರಸಿದ್ಧ ಪಟ್ಟಣವಾಗಿ `ಭೂಕೈಲಾಸ'ವಾಗಿ ಮಾರ್ಪಟ್ಟುದು ನಂಬಲಸಾಧ್ಯವಾದ ಪವಾಡ! ಸಿದ್ಧರಾಮನ ಜನ್ಮಸ್ಥಳ ಸೊನ್ನಲಿಗೆ-ಈಗಿನ ಸೊಲ್ಲಾಪುರವೆಂದು ಭಾವಿಸಲಾಗಿತ್ತು. ಈಚೆಗೆ ಬೀದರ್‍ನ

ಬೆಲ್ದಾಳ ಸಿದ್ಧರಾಮ ಶರಣರು ಇದನ್ನು ಅಲ್ಲಗಳೆದು ಈಗಿನ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಸೊನ್ನಲಿಗೆ ಅಥವಾ ಸೊನಗಿ ಎಂದು ಹೇಳುವರು. ಅವರ ಹೊಸ ಶೋಧದ ಪ್ರಕಾರ ಜತ್ * ತಾಲೂಕಿನ ಸೊನ್ನಲಿಗೆಯಲ್ಲಿ ಸಿದ್ಧರಾಮೇಶ್ವರರ ಜನಾಂಗದ ಕುಡು ಒಕ್ಕಲಿಗರ 30 ಮನೆಗಳಿದ್ದು ಅವರೆಲ್ಲರೂ ಹಾಗೂ ಗ್ರಾಮದ ಬಹುತೇಕ ಜನತೆ ಸಿದ್ಧರಾಮೇಶ್ವರನನ್ನು ಆರಾಧಿಸುತ್ತಾರೆ. ಗ್ರಾಮದಲ್ಲಿ ಸಿದ್ಧರಾಮೇಶ್ವರ ದೇವಾಲಯ, ಸಿದ್ಧರಾಮೇಶ್ವರ ಕೆರೆ ಇವೆ.

ಸಿದ್ಧರಾಮನು ಚಿಕ್ಕವನಾಗಿದ್ದಾಗ ಹಸಿದು ಬಂದಿದ್ದ ಮಲ್ಲಯ್ಯನೆಂಬ ಜಂಗಮನಿಗೆ ನವಣೆಯ ಹೊಲದಲ್ಲಿ ರಸವತ್ತಾದ ಬೆಳಸಿ (ಸೀತನಿ) ಮಾಡಿಕೊಟ್ಟ. ಶ್ರೀಶೈಲ ಮ್ಲಕಾರ್ಜುನನೇ ಮಲ್ಲಯ್ಯನ ವೇಷದಲ್ಲಿ ಬಂದಿದ್ದ. ಆತ ಬೆಳಸಿಯ ಜೊತೆಯಲ್ಲಿ ಮೊಸರು ಇದ್ದರೆ ಚೆನ್ನಾಗಿರುತ್ತದೆ ಎಂದಾಗ ಬಾಲಕ ಸಿದ್ಧರಾಮನು ಮೊಸರು ತರಲು ಮನೆಗೆ ಓಡಿದ. ಮಾತು ಬಾರದ ಬಾಲಕ ಬಾಯಿಬಿಟ್ಟು ಅಮ್ಮಾ ಮೊಸರು ಕೊಡು ಎಂದು ಕೇಳಿದ ಎಂಬ ಪ್ರತೀತಿಯಿದೆ. ಈ `ನವಣೆಯ ಹೊಲ' ಸೊನ್ನಲಿಗೆಯಲ್ಲಿ ಈಗಲೂ ಇದೆ. ಈ 60 ಎಕರೆ ನವಣೆ ಹೊಲವನ್ನು ಈಗ ನೀರಾವರಿಗೆ ಅಳವಡಿಸಲಾಗಿದ್ದು, ಅದು ಮಲ್ಲಪ್ಪ ಭೂಪನೂರ ಎಂಬುವರ ಅಧೀನದಲ್ಲಿದೆ ಎಂದು ಬೆಲ್ದಾಳ ಶರಣರು ಹೇಳುವರು.

ಸಿದ್ಧರಾಮನ ತಂದೆ ಮೊರಡಿಯ ಮುದ್ದುಗೌಡ ತಾಯಿ ಸುಗ್ಗವ್ವೆ ಎಂದು ಘಟ್ಟಿವಾಳಯ್ಯ ತನ್ನ ವಚನವೊಂದರಲ್ಲಿ ಹೇಳುವನು. ಈ ಹೆಸರುಗಳನ್ನು ಈಗಲೂ ಸೊನ್ನಲಿಗೆ ಗ್ರಾಮದ ಜನತೆ ತಮ್ಮ ಮಕ್ಕಳಿಗೆ ಇಡುತ್ತಿರುವರು.

ಸಿದ್ಧರಾಮನು ಸುಗ್ಗವ್ವೆಯ ಗರ್ಭದಲ್ಲಿರುವಾಗ ರೇವಣಸಿದ್ಧೇಶ್ವರರು ಸೊನ್ನಲಿಗೆಗೆ ಭೇಟಿ ನೀಡಿ ಆ ಗ್ರಾಮದ ಹೊರಗೆ ಪಲ್ಲಕ್ಕಿಯಿಂದಿಳಿದು ಕಾಲುನಡುಗೆಯಲ್ಲಿ ಮುದ್ದುಗೌಡ-ಸುಗ್ಗವ್ವೆಯರ ಮನೆಗೆ ಹೊರಟರು. ಶಿಷ್ಯರು ಗುರುಗಳ ಈ ವಿಚಿತ್ರ ವರ್ತನೆಗೆ ಕಾರಣ ಕೇಳುವರು. ಈ ಗ್ರಾಮದಲ್ಲಿ ಯೋಗಿಯೊಬ್ಬನ ಜನನವಾಗುತ್ತದೆಯೆಂದು ರೇವಣಸಿದ್ಧೇಶ್ವರರು ಹೇಳುವರು. ಮುದ್ದುಗೌಡ ಊರ ಹೊರಗೆ ರೇವಣಸಿದ್ಧೇಶ್ವರರನ್ನು ಸ್ವಾಗತಿಸಿದನು. ಊರ ಹೊರಗಿನ ಆ ಸ್ಥಳವನ್ನು `ಗುರುಭೇಟ್' ಎಂದು ಈಗಲೂ ಕರೆಯಲಾಗುತ್ತದೆಯೆಂದೂ, ಈ ಪ್ರದೇಶದ ಹೊಲವನ್ನು `ಮೊರ್ಡಿ ಮುದ್ದುಗೌಡನ ಹೊಲ' ಎಂದು ಕರೆಯಲಾಗುತ್ತದೆಯೆಂದೂ ಬೆಲ್ದಾಳ ಶರಣರು ಅಭಿಪ್ರಾಯಪಡುವರು. ಸಿದ್ಧರಾಮೇಶ್ವರರ ಬಾಲ್ಯದ ಗೆಳೆಯ ಶರಣ ಹಾವಿನಹಾಳ ಕಲ್ಲಯ್ಯನ ಪ್ರಸ್ತಾಪ ಅವರ ವಚನಗಳಲ್ಲಿ ಬಂದಿದೆ. ಸೊನ್ನಲಿಗೆಯ ನೆರೆಯ ಊರೇ ಹಾವಿನಹಾಳ ಎಂದು ಅವರು ಹೇಳುವರು. ಶ್ರೀ ಬೆಲ್ದಾಳ ಶರಣರ ಈ ಹೊಸ ಶೋಧವನ್ನು ಡಾ. ಎಂ. ಚಿದಾನಂದ ಮೂರ್ತಿಯವರು ಕ್ಷೇತ್ರಕಾರ್ಯ ಮಾಡಿ ಅದು ಸತ್ಯಕ್ಕೆ ದೂರವಾದುದೆಂದು ನಿರಾಕರಿಸಿರುವರು. * ಅವರು ಅಭಿಪ್ರಾಯಪಡುವಂತೆ ``....ಸಿದ್ಧರಾಮನು ಸೊನ್ನಲಿಗೆಯಲ್ಲಿ ಐಕ್ಯನಾದ ಮೇಲೆ ಅವನ ಬಗ್ಗೆ ಅಪಾರ ಭಕ್ತಿ ಹೊಂದಿದ್ದ ಸೊನಗಿ ಊರಿನ ಭಕ್ತರು ಸೊನ್ನಲಿಗೆಗೆ ಹೋಗಿ, ಅಲ್ಲಿ ತಯಾರಾಗಿದ್ದ ಶಿವಲಿಂಗವನ್ನು ತಂದು ತಮ್ಮ ಊರಲ್ಲಿ ಸ್ಥಾಪಿಸಿ ಸಿದ್ಧರಾಮೇಶ್ವರ ಗುಡಿಯನ್ನು ಕಟ್ಟಿರಬೇಕು. (ಅಥವಾ ತಾವೇ ತಮ್ಮ ಊರಲ್ಲಿ ಆ ಶಿವಲಿಂಗವನ್ನು ಮಾಡಿಸಿದ್ದರೂ ಆಶ್ಚರ್ಯವಿಲ್ಲ). ತಮ್ಮ ಊರಿಗೂ ಸಿದ್ಧರಾಮನ ಹೆಸರನ್ನೇ ನಾಮಕರಣ ಮಾಡಿದರು. ಅಥವಾ ಆ ಊರಿಗೂ ಆ ಮೊದಲೇ ಸೊನ್ನಲಿಗೆ ಎಂಬ ಹೆಸರೇ ಇದ್ದು, ಆ ಹೆಸರು ತಮ್ಮ ಊರಲ್ಲಿ ಸಿದ್ಧರಾಮೇಶ್ವರದೇವರ ಪ್ರತಿಷ್ಠೆಗೆ ಸೂಚನೆ ನೀಡಿದ್ದರೂ ಆಶ್ಚರ್ಯವಿಲ್ಲ. ಆದರೆ ಒಂದಂತೂ ತೀರಾ ಸ್ಪಷ್ಟ. ಸಿದ್ಧರಾಮನ ಸೊನ್ನಲಿಗೆಯಲ್ಲಿ ಅವನ ಬದುಕಿಗೆ, ಸಾಧನೆಗೆ ಸಂಬಂಧಿಸಿದಂತೆ ಯಾವಾವ ಕುರುಹುಗಳಿವೆ ಅವೆಲ್ಲವನ್ನೂ ತಮ್ಮ ಊರಲ್ಲೇ ಸೃಷ್ಟಿಮಾಡಿಕೊಳ್ಳುವುದರ ಅಥವಾ ಗುರುತಿಸಿಕೊಳ್ಳುವುದರ ಮೂಲಕ ತಮ್ಮ ಊರನ್ನು (ಸೊನಿಗೆ ಊರನ್ನು) ಒಂದು ರೀತಿಯಲ್ಲಿ ಅಭಿನವ ಸೊನ್ನಲಿಗೆ ಮಾಡಿಕೊಳ್ಳುವ ಪ್ರಯತ್ನ ನಡೆದಿದೆ. ಸಿದ್ಧರಾಮನ ಗುಡಿ ಅವನು ಕಟ್ಟಿಸಿದ ಕೆರೆ, ಅವನ ತಂದೆಯ ನವಣೆಯ ಹೊಲ, ರೇವಣಸಿದ್ಧನ ಭೇಟಿಯ ಜಾಗ ಇವೆಲ್ಲವೂ ಆ ಊರಲ್ಲಿ ಇಲ್ಲವೇ ನಿರ್ಮಾಣವಾದುವು ಅಥವಾ ಹೆಸರುಗೊಂಡುವು. ಸೊನಗಿ ಊರಲ್ಲಿ ಕೆಲವು ಪ್ರಾಚೀನ ಭಗ್ನ ದೇವಾಲಯಗಳ ಕುರುಹುಗಳಿವೆ. ಅವುಗಳಲ್ಲಿ ಮಲ್ಲಿಕಾರ್ಜುನ ದೇವಾಲಯದಂತಹ ದೇವಾಲಯವೂ ಒಂದಾಗಿದ್ದರೆ ಆಶ್ಚರ್ಯವಿಲ್ಲ. ತರೀಕೆರೆ ತಾಲೂಕಿನಲ್ಲಿರುವ ಸೊಲ್ಲಾಪುರ ಗ್ರಾಮದಲ್ಲಿ ಸಿದ್ಧರಾಮೇಶ್ವರ ಗದ್ದುಗೆ ದೇವಾಲಯ ಮತ್ತು ಕೆರೆ (ಹೊಂಡ) ಇದ್ದು, ಅಲ್ಲಿ ದೊಡ್ಡ ಜಾತ್ರೆಯೇ ನಡೆಯುತ್ತದೆ. ಹಿಂದೊಮ್ಮೆ ಯಾರೋ ಭಕ್ತರು ಸಿದ್ಧರಾಮನ ಗದ್ದುಗೆ ಕಟ್ಟಿಸಿ, ಅದರ ಸುತ್ತ ಬೆಳೆದ ಊರಿಗೆ ``ಸೊಲ್ಲಾಪುರ' ಎಂದು ನಾಮಕರಣ ಮಾಡಿರುವ ಸಾಧ್ಯತೆ ಇದೆ.'

ಸಿದ್ಧರಾಮನ ಬದುಕು-ವ್ಯಕ್ತಿತ್ವವನ್ನು ತಿಳಿಯಲು ಅವನು ಬರೆದಿರುವ ವಚನಗಳೇ ಮೂಲ ಆಕರ. ಆದರೂ, ಅವನ ಬದುಕಿನ ಎಲ್ಲ ಸಂಗತಿಗಳನ್ನೂ ವಚನಗಳು ತಿಳಿಯ ಹೇಳಲು ಸಾಧ್ಯವಿಲ್ಲ. ಏಕೆಂದರೆ, ವಚನಗಳು ಅಂದಂದಿನ ಅನುಭವ-ಅನುಭಾವಗಳಿಗೆ ವಚನಕಾರನ ಮನಸ್ಸು ಹೇಗೆ ಸ್ಪಂದಿಸಿತೆಂಬುದನ್ನು ಅಕ್ಷರ ಮಾಧ್ಯಮದ ಮೂಲಕ ತಿಳಿಯಪಡಿಸುತ್ತವೆ. ಈ ಇತಿಮಿತಿಯಿಂದಾಗಿ ಯಾವುದೇ ಶರಣನ ಸಮಗ್ರ ಬದುಕಿನ ವಿವರಗಳನ್ನು ಅವನು ಬರೆರಬಹುದಾದ ವಚನಗಳು ಹೇಳಲಾರವು. ಆದ್ದರಿಂದ ನಾವು ಅನಿವಾರ್ಯವಾಗಿ ಕಾಲಕಾಲಕ್ಕೆ ಶರಣನನ್ನು ಕುರಿತು ಕೃತಿರಚನೆ ಮಾಡಿದ ಕವಿಗಳ ಕೃತಿಗಳನ್ನು ಆಧರಿಸಬೇಕಾಗುತ್ತದೆ. ಸಿದ್ಧರಾಮನ ಬದುಕನ್ನು ಕುರಿತು ಹರಿಹರ ರಗಳೆಯೊಂದನ್ನು ಬರೆದಿರುವ ಸಾಧ್ಯತೆಯಿದೆ. ವಿದ್ವಾಂಸರು ಅಭಿಪ್ರಾಯಪಡುವಂತೆ ರಗಳೆಯನ್ನು ಆಧರಿಸಿ ಬಹುಶಃ ರಾಘವಾಂಕನು `ಸಿದ್ಧರಾಮ ಚಾರಿತ್ರ'ವನ್ನು ಬರೆದಿರಬಹುದು. ಹರಿಹರನು ಸಿದ್ಧರಾಮನ ಬಗೆಗೆ ಬರೆದಿರಬಹುದಾದ ರಗಳೆಯ ಕೃತಿ, ಜನತೆಯಲ್ಲಿ ಸಿದ್ಧರಾಮನ ಬಗೆಗೆ ಪ್ರಚತವಿದ್ದ ಅನೇಕ ಕಥೆಗಳು ಮತ್ತು ಸ್ವತಃ ಸಿದ್ಧರಾಮನು ಬರೆರುವ ವಚನಗಳು -ಈ ಮೂಲಸಾಮಗ್ರಿಗಳನ್ನು ಉಪಯೋಗಿಸಿಕೊಂಡು ರಾಘವಾಂಕನು `ಸಿದ್ಧರಾಮ ಚಾರಿತ್ರ' ಗ್ರಂಥರಚನೆ ಮಾಡಿರುವ ಸಾಧ್ಯತೆಯಿದೆ.

ರಾಘವಾಂಕನ ದೃಷ್ಟಿಯಲ್ಲಿ ಕಥಾನಾಯಕ ಸಿದ್ಧರಾಮನು ಅಯೋನಿಜನು; ಭೂವಳಯದೊಳಗುಳ್ಳ ಸರ್ವ ಜೀವಾಳಿಗಳ ಪಾವನಂ ಮಾಡಲೆಂದು ಬಂದವನು; ಕಾರಣರುದ್ರನು. `ಧರೆಗೆ ಸೊನ್ನಲಿಗೆಪುರ ಕೈಲಾಸ. ಆ ಜಗದಗುರು ಸಿದ್ಧರಾಮನು ಈಶ್ವರನು. ಅಲ್ಲಿ ಮೆರೆವ ಗುಡ್ಡರು ಗಣೇಶ್ವರರು. ಅಖಿಳ ಜನವು ಅಮರರು. ಅವರ ಸತಿಯರು ರುದ್ರಕನ್ಯೆಯರು. ನೆರೆದ ಶಿವಭವನಂಗಳು ಅಷ್ಟಾಷಷ್ಟಿಕ್ಷೇತ್ರ. ಇದನ್ನು ಅಲ್ಲಗಳೆಯುವ ಪರವಾದಿ ಯಾರೋ ಅವನ ಶಿರದ ಮೇಲೆ ನನ್ನ ಎಡಪಾದದ ಪಾದರಕ್ಷೆಯನ್ನು ಇಳುಹುವೆನು' -ಎನ್ನುವ ಉಗ್ರನಿಷ್ಠೆ ರಾಘವಾಂಕನದು. ರಾಘವಾಂಕ ತನ್ನ ಕಥಾನಾಯಕನ ಜೀವನಾದರ್ಶವನ್ನು `ಸಾಕಾರನಿಷ್ಠೆ ಭೂತಂಗಳೊಳಗನುಕಂಪೆ ತಾನೆ ಪರಬೊಮ್ಮ' ಎಂದು ಹೇಳಿಸಿರುವನು. ಪೆÇ್ರ. ಡಿ.ಎಲ್. ನರಸಿಂಹಾಚಾರ್‍ರವರು ಅಭಿಪ್ರಾಯಪಡುವಂತೆ ``ಈ ಸೂತ್ರ ಸಿದ್ಧನ ಬದುಕಿನ ಸಾರ, ಅವನ ಕಥೆ ಇದಕ್ಕೆ ವ್ಯಾಖ್ಯಾನ. ಅಲ್ಲಿ ಬರುವ ಎಲ್ಲ ಸಂದರ್ಭಗಳನ್ನೂ ಆಖ್ಯಾನಗಳನ್ನೂ ಇದು ಪೆÇೀಣಿಸಿ ಕಥೆಯನ್ನು ಮೂಲಾಕಾರವಾಗಿ ಮಾಡಿದೆ.'1 ಸಾಕಾರನಿಷ್ಠೆ ಸಿದ್ಧರಾಮನಿಗೆ ಅಗತ್ಯವಿಲ್ಲವಾದರೂ ಅದು ಲೋಕದ ಜನರಿಗಾಗಿ ಬೇಕಾಗಿದೆ. ಜನರ ನಂಬಿಕೆಯನ್ನು ಸಿದ್ಧರಾಮ ಪ್ರಶ್ನಿಸುವವನಲ್ಲ. ಏಕೆಂದರೆ ಸಾಕಾರನಿಷ್ಠೆ ಭಾರತೀಯರ ನರನಾಡಿಗಳಲ್ಲಿ ಹಂಚಿಹೋಗಿರುವ ಭಾವನೆ. ಜನರ ಭಾವನೆಯನ್ನು ಗೌರವಿಸಲು ಅವನು ದೇವಾಲಯ ನಿರ್ಮಾಣ ಲಿಂಗಪ್ರತಿಷ್ಠೆ ಇತ್ಯಾದಿಗಳನ್ನೆಲ್ಲ ಮಾಡುವನು. ಅವನು `ದಯಾ ಸಮುದ್ರ' ನಾಗಿರುವುದರಿಂದ ಸರ್ವಜೀವಾಳಿಗಳ ಕ್ಷೇಮಚಿಂತನೆ ಮಾಡುವನು. `ಹೆಂದದಣು ಮೊದಲಿರುಹೆ ಪಶುಪಕ್ಷಿಮೃಗವಾನೆ'ಗಳ ಹಿತವನ್ನು ಬಯಸುವನು; ಭೂದಾನ, ಗೋದಾನ, ಕನ್ಯಾದಾನ, ವಸ್ತ್ರದಾನ, ಮಹಿಷದಾನ, ಅನ್ನದಾನಗಳನ್ನು ಮಾಡುವನು. ``ಸಾಕಾರ ನಿಷ್ಠೆಯಿಂದ ಬರುವ ಆತ್ಮಕಲ್ಯಾಣವೂ ಭೂತಾನುಕಂಪೆಯಿಂದ ದೊರೆಯುವ ಲೋಕಕಲ್ಯಾಣವೂ ಅಹಮಹಮಿಕೆಯಿಂದ ವೃದ್ಧಿಗೊಂಡಾಗ ಅವು ಸಮಸ್ತ ಸನ್ಮಂಗಳ ಸ್ವರೂಪಿಯಾದ ಪರಬ್ರಹ್ಮವಲ್ಲದೆ ಮತ್ತೇನು? ಈ ತತ್ವದ ತಳಹದಿಯ ಮೇಲೆ ಸಿದ್ಧನ ಚರಿತ್ರೆ ಕವಿಯಿಂದ ನಿರ್ಮಿತವಾಗಿದೆ.....'2

ಸಿದ್ಧರಾಮನಿಗೆ `ವಚನ'ವು ಕೇವಲ ಅಭಿವ್ಯಕ್ತಿ ಮಾಧ್ಯಮವಾಗಿಲ್ಲ. ಅದು `ಕಪಿಲಸಿದ್ಧ ಮಲ್ಲಿಕಾರ್ಜುನನನ್ನು ತಿಳಿಯಲಿಕ್ಕೆ' ನೆರವಾಗುವ ಸಾಧನ. ವಚನವು ಅವನ ಪಾಲಿಗೆ `ಆದ್ಯರ ಆಜ್ಞೆ', `ಈಶ್ವರನಿಗೆ ಬೆಳಗುವ ಜ್ಯೋತಿ'. ಮಾತಿಗಿಂತ ನಡೆಗೆ, ಅನುಭವಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡುವ ಅವನು `ಅನುಭವವೆಂಬುದು ಅನುಭಾವಿಕಗಲ್ಲದೆ ಹೊತ್ತಗೆಯಲ್ಲ್ಲಿ ನೋಡಾ, ಎಂದಿರುವನು. ಪುಸ್ತಕ ವಿದ್ಯೆಯೆ ವಿದ್ಯೆ ಎನ್ನುವ ಪರಂಪರೆಯ ಹುಸಿ ನಂಬಿಕೆಯನ್ನು `ವಿದ್ಯೆ ಎಂದಡೆ ಭಾರತ- ರಾಮಾಯಣವಲ್ಲ.....' ಎನ್ನುವ ಮೂಲಕ ಖಂಡಿಸುವನು. ಇದೇ ಧೋರಣೆ ಕೆಳಗಿನ ಈ ವಚನದಲ್ಲೂ ನಾವು ಕಾಣಬಹುದು:

ವಚಿಸಿ ವಚಿಸಿ ಅನುಭಾವಿಯಾಗದವ ಪಿಶಾಚಿಯಯ್ಯಾ;

ವಚಿಸಿ ಅನುಭವಿಯಾದವ ಪಂಡಿತನಯ್ಯಾ.

ವಿದ್ಯೆ ಎಂಬುದು ಅಭ್ಯಾಸಿಕನ ಕೈವಶ,

ಅವಿದ್ಯೆಯೆಂಬುದು ಸರ್ವರಲ್ಲಿ ವಶ.

ವಿದ್ಯಾವಿದ್ಯೆಯನರಿತು ಜಗದ್ವೇದ್ಯನಾಗಬಲ್ಲಡೆ,

ಮಹಾಪಂಡಿತ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.

ಪಾಂಡಿತ್ಯಕ್ಕಿಂತ ಅನುಭಾವಕ್ಕೆ, ಹೃದಯಶುದ್ಧಿಗೆ, ಸರ್ವಜೀವಾನುಕಂಪೆಗೆ ಹೆಚ್ಚಿನ ಮಹತ್ವ ನೀಡಬೇಕೆಂಬುದು ಸಿದ್ಧರಾಮನ (ಮೇಲಾಗಿ ಎಲ್ಲ ವಚನಕಾರರ) ಆಶಯ. ಹೀಗಾಗಿ, ವಚನ ರಚನೆಯ ಬಿಟ್ಟು ಕುತ್ಸಿತ ಕಾವ್ಯಾಲಂಕಾರ ನೋಡುವರ ನೋಡಿ ಮಹಾದೇವ ಕಪಿಲಸಿದ್ಧಮಲ್ಲಿಕಾರ್ಜುನನು `ಹುಡಿಮಣ್ಣ ಹೊಯ್ಯದೆ ಮಾಬನೆ' ಎನ್ನುವನು. ಅಷ್ಟೇ ಅಲ್ಲ,

ಶಾಸ್ತ್ರವೆಂಬುದು ಮನ್ಮಥಶಸ್ತ್ರವಯ್ಯಾ.

ವೇದಾಂತವೆಂಬುದು ಮೂಲ ಮನೋವ್ಯಾಧಿಯಯ್ಯಾ.

ಪುರಾಣರೆಂಬುದು ಮೃತವಾದವರ ಗಿರಾಣವಯ್ಯ.

ತರ್ಕವೆಂಬುದು ಮರ್ಕಟಾಟವಯ್ಯಾ.

ಆಗಮವೆಂಬುದು ಯೋಗದ ಘೋರವಯ್ಯಾ.

ಇತಿಹಾಸವೆಂಬುದು ರಾಜರ ಕಥಾಭಾಗವಯ್ಯಾ.

ಸ್ಮøತಿಯೆಂಬುದು ಪಾಪ ಪುಣ್ಯ ವಿಚಾರವಯ್ಯಾ.

ಆದ್ಯರ ವಚನವೆಂಬುದು ಬಹುವೇದ್ಯವಯ್ಯಾ,

ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ತಿಳಿಯಲಿಕ್ಕೆ.

ಎಂಬ ಈ ವಚನದ ಧೋರಣೆಯನ್ನು ಗಮನಿಸಿದಾಗ ಪರಂಪರೆಯಿಂದ ಬಂದ ಕಾವ್ಯ, ಶಾಸ್ತ್ರ, ವೇದಾಂತ, ಪುರಾಣ, ತರ್ಕ, ಆಗಮ, ಇತಿಹಾಸ, ಸ್ಮøತಿ -ಇವಾವೂ ಜನಸಾಮಾನ್ಯನನ್ನು ಸ್ಪಂದಿಸದೆ, ಅವನ ಅಂತರಂಗದ ವಿಕಾಸಕ್ಕೆ ಕಾರಣವಾಗದೆ ಹೋದುದರ ಬಗೆಗೆ ನಿರಾಶೆ ಟೀಕೆಯ ರೂಪದಾಳಿರುವಂತೆ ತೋರುತ್ತದೆ.

ಶಿವಶರಣರ ವಚನಗಳು ನಮ್ಮ ನಡಾವಳಿಗಳನ್ನು ತಿದ್ದಿಕೊಳ್ಳುವ ಒರೆಗಲ್ಲು. `ನಮ್ಮ ನಡಾವಳಿಗೆ ನಮ್ಮ ಪುರಾತರ ನುಡಿಯೆ ಇಷ್ಟವಯ್ಯಾ' ಎಂಬ ಮಾತಿನಿಂದ ಇದು ಸ್ಪಷ್ಟವಾಗುತ್ತದೆ. ನಮ್ಮ ಶಿವಶರಣರ ವಚನಗಳನ್ನು ಮೇಲಿಂದ ಮೇಲೆ ಆಸ್ವಾದಿಸುವುದರಿಂದ ಅವುಗಳಲ್ಲಿ ಅಂತರ್ಗತವಾಗಿರುವ ದಿವ್ಯ ಜೀವನಾನುಭವ ವೇದ್ಯವಾಗುತ್ತದೆ ಎಂಬುದು `ಅಗಿದಗಿದು ನೋಡುವುದು' ಎಂಬ ಮಾತಿನಿಂದ ವಿದಿತವಾಗುತ್ತದೆ. ಕನ್ನಡದ ವಿಶಿಷ್ಟ ಕಾಣಿಕೆಯಾದ ವಚನಸಾಹಿತ್ಯವು ಬರಿಯ ವಾಗ್ರಚನೆಯಲ್ಲ ಎಂಬುದನ್ನು `ವಚನಾನುಭವೊ ವಚನೋ ನ' ಎಂಬ ವಾಕ್ಯದ ಮೂಲಕ ಅವನು ವಿಷದಪಡಿಸುವನು. ಅವನಿಗೆ ವಚನಗಳ ಮೇಲಿನ ಅಭಿಮಾನ ಅತಿಶಯವಾದುದೆಂಬುದನ್ನು ಈ ಕೆಳಗಿನ ವಚನ ಶ್ರುತಪಡಿಸುತ್ತದೆ:

ಎಮ್ಮ ವಚನದೊಂದು ಪಾರಾಯಣಕ್ಕೆ

ವ್ಯಾಸನದೊಂದು ಪುರಾಣ ಸಮ ಬಾರದಯ್ಯಾ.

ಎಮ್ಮ ವಚನದ ನೂರೆಂಟಧ್ಯಯನಕ್ಕೆ

ಶತರುದ್ರೀಯಯಾಗ ಸಮಬಾರದಯ್ಯಾ.

ಎಮ್ಮ ವಚನದ ಸಾಸಿರ ಪಾರಾಯಣಕ್ಕೆ

ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,

ಕಪಿಲಸಿದ್ಧಮಲ್ಲಿಕಾರ್ಜುನ.

ಸಿದ್ಧರಾಮನ ವಚನಗಳಲ್ಲಿ ಅವನ ಅನೇಕ ವೈಯಕ್ತಿಕ ಸಂಗತಿಗಳು ದಾಖಲುಗೊಂಡಿವೆ. ಮಲ್ಲಿಕಾರ್ಜುನನು ಲಿಂಗಪ್ರತಿಷ್ಠ್ಠೆ ಮಾಡೆಂದು ನಿರೂಪಿಸಿದುದು, `ತನಗೆ ಬೇರೆ ಸ್ವಾತಂತ್ರ್ಯವಿಲ್ಲದ ಕಾರಣ ಲಿಂಗಪ್ರತಿಷ್ಠ್ಠೆ ಮಾಡಿದುದು; ಯೋಗಿಯ ಶರೀರ ವೃಥಾಯ ಹೋಗಲಾಗದು ಪುಣ್ಯವ ಪುಣ್ಯವ ಮಾಡುವುದು ಲೋಕಕ್ಕೆ' ಎಂಬ ಆದರ್ಶವನ್ನು ಮುಂದಿಟ್ಟುಕೊಂಡು ಪುಣ್ಯಕಾರ್ಯಗಳನ್ನು ನೆರವೇರಿಸಿದ್ದು; ಮಲ್ಲಿಕಾರ್ಜುನನ ಪ್ರೇರಣೆಯಂತೆ ಕೆರೆ, ಬಾವಿ, ಹೂದೋಟ, ಚೌಕ ಛತ್ರಗಳನ್ನು ಮಾಡಿಸಿದುದು; ತಾನು ಕಟ್ಟಿಸಿದ ಕೆರೆಯ ನೀರು ತನ್ನ ಮನದ ಸರ್ವಜೀವದಯಾಪರತ್ವಗಳು ಎಂದಿಗೂ ಬತ್ತಿಹೋಗುವುದಿಲ್ಲವೆಂದು ಪ್ರತಿಜ್ಞೆಮಾಡಿದುದು; ತಾನು ಮರೆತದ್ದು ; ತನಗೆ ಮೂರು ಕಣ್ಣಿರುವುದನ್ನು ಲೋಕವೆಲ್ಲ ತಿಳಿರುವುದು; ಚೆನ್ನಬಸವಣ್ಣನು ತನಗೆ ದೀಕ್ಷೆಯನ್ನಿತ್ತುದು; ಇಷ್ಟಲಿಂಗವನ್ನು ಧರಿಸಿದ ಮೇಲೆ ಸ್ಥಾವರ ಲಿಂಗಪೂಜೆಯನ್ನು ನಿಲ್ಲಿಸಿದುದು; ಕಪಿಲ ಸಿದ್ಧಮಲ್ಲಿಕಾರ್ಜುನನು ತನ್ನಿಂದ ತುಪ್ಪದ ಅಭಿಷೇಕ, ಅಮೃತದ ಅಭಿಷೇಕ, ಸರ್ವಾಭಿಷೇಕ ಸ್ವೀಕರಿಸಿದುದು -ಹೀಗೆ ಸಿದ್ಧರಾಮನ ಬದುಕಿನ ಅನೇಕ ವಿವರಗಳು ವಚನಗಳಲ್ಲಿ ಅಂತರ್ಗತವಾಗಿರುವುದು ಕಂಡುಬರುತ್ತದೆ.

ಸಿದ್ಧರಾಮನ ಜೀವನದಲ್ಲಿ ಎರಡು ಹಂತಗಳಿವೆ :1. ಕಲ್ಯಾಣಕ್ಕೆ ಬರುವ ಮುನ್ನ ಸೊನ್ನಲಿಗೆಯಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದ್ದುದು. 2. ಕಲ್ಯಾಣಕ್ಕೆ ಬಂದು ಬಸವಾದಿ ಶಿವಶರಣರ ಜೊತೆ ಸೇರಿಕೊಂಡು ತಾನು ಹಿಂದೆ ಕೈಕೊಂಡ ಲೌಕಿಕ ಸಾಮಾಜಿಕ ಕಾರ್ಯಗಳ ಬಗೆಗೆ ಒಂದು ರೀತಿಯ ಅತೃಪ್ತಿಯನ್ನೂ ಪಶ್ಚಾತ್ತಾಪವನ್ನೂ ಹೊಂದಿದ್ದುದು (ನೋಡಿ:``ಹಸುಳೆಯಾಗಿಯು ನಾನು ಕೆರೆ ಬಾವಿ ದೇವಾಲ್ಯ| ವಿರಚಿಸಿ ಭವಕ್ಕೆ ಬಂದು ಫಲವನುಂಡು| ನರಕಕೆ ಬೀಳುವನ ಕರುಣ ಕರದಿಂದೆತ್ತಿ ನಿನ್ನ ಹೊರೆಯೊಳಗಿರಿಸಿದೆ ಯೋಗಿನಾಥ||' -ಬಸವ ಸ್ತೋತ್ರದ ತ್ರಿವಿಧಿ). ಮೊದಲನೆಯ ಹಂತದ್ದು ಲೋಕೋಪಕಾರಿಯಾಗಿದ್ದದ್ದು, ಸರ್ವಜೀವ ದಯಾಪಾರಿಯಾದದ್ದು. ಎರಡನೆಯ ಹಂತದ್ದು ಲೋಕವನ್ನು ನಿರಾಕರಿಸಿದ `ಅನುಭಾವವನ್ನು ಸಂಪಾದಿಸುವ' ಕಡೆಗೆ ಲಕ್ಷ್ಯವಿರುವಂತಹದ್ದು.

ವಚನಕಾರರಲ್ಲಿ ಹೆಚ್ಚಿನ ಸಾಮಾಜಿಕ ಹೊಣೆಗಾರಿಕೆಯನ್ನು (soಛಿiಚಿಟ ಅommiಣmeಟಿಣ) ಹೊತ್ತವರಲ್ಲಿ ಮುಖ್ಯರು ಬಸವಣ್ಣ ಹಾಗೂ ಸಿದ್ಧರಾಮ. ಒಂದು ರಾಜ್ಯದ ಪ್ರಧಾನಿಯಾದ ಬಸವಣ್ಣನಿಗೆ ರಾಜಕೀಯದ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯು ಬಹಳವಿದ್ದಿತು. ಅದನ್ನು ಚೆನ್ನಾಗಿ ನಿರ್ವಹಿಸಿದವನು ಬಸವಣ್ಣ. ಬಸವಣ್ಣ ನಿರ್ವಹಿಸಿದ ಸಾಮಾಜಿಕ ಹೊಣೆಗಾರಿಕೆಯ ಬಗೆಗೆ ನಾವು ಅವನ ವಚನಗಳ ಮೂಲಕ ಅರಿಯಬಹುದು. ಸಿದ್ಧರಾಮನಿಗೂ ಪ್ರಮುಖವಾದುದು ಸಾಮಾಜಿಕ ಹೊಣೆಗಾರಿಕೆ. `ಮತ್ರ್ಯಲೋಕವು ಕರ್ತಾರನ ಕಮ್ಮಟ'ವೆಂದು ಭಾವಿಸಿ `ಇಹ’ವನ್ನು ಪ್ರೀತಿಸುವುದು, ಬದುಕನ್ನು ಪ್ರೀತಿಸುವುದು ಸಾಮಾಜಿಕ ಹೊಣೆಗಾರಿಕೆಯಲ್ಲಿ ಪ್ರಧಾನವಾದುದು. ಸಾಮಾಜಿಕ ಹೊಣೆಗಾರಿಕೆಯ ಅರಿವು ಬರಬೇಕಾದರೆ ಜನಸಾಮಾನ್ಯರ ನಡುವೆ ಬೆರೆಯುವ, ಅವರ ಬದುಕು ಹಸನಾಗಬೇಕಾದರೆ ಏನು ಮಾಡಬೇಕೆಂಬುದನ್ನು ಚಿಂತಿಸುವ ಮನೋಭಾವ ಬೇಕು; ಹೊಗಳಿಕೆ ತೆಗಳಿಕೆಗಳನ್ನು ಸಮಾನವಾಗಿ ಸ್ವೀಕರಿಸುವ ಗಟ್ಟಿ ಮನಸ್ಸು ಬೇಕು; ಎಷ್ಟೇ ಕಷ್ಟ ಬಂದರೂ ತನ್ನ ಗುರಿ ಮುಟ್ಟಿಯೇ ಮುಟ್ಟುತ್ತೇನೆನ್ನುವ ಛಲ ಬೇಕು; ಮೇಲಾಗಿ, ಮಾನವೀಯತೆ ಸದಾ ಹೃದಯದಲ್ಲಿ ಮಿಡಿಯುತ್ತಿರಬೇಕು. ಸಿದ್ಧರಾಮನು ಕೈಗೊಂಡ ಕೆರೆ, ಬಾವಿ, ಹೂದೋಟ, ಚೌಕ, ಛತ್ರ, ಸಾವಿರ ಮದುವೆಗಳು, ಬಡವರ ನಿರ್ಗತಿಕರ ಋಣಪರಿಹಾರ -ಇವೇ ಮೊದಲಾದ ಕಾರ್ಯಗಳಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಗುರುತಿಸಬಹುದು. ಬಿಲ್ಲೇಶ ಬೊಮ್ಮಯ್ಯನ ಪ್ರಸಂಗ, ಏಲೇಶನಿಗೆ ಪ್ರಾಣವಿತ್ತ ಪ್ರಸಂಗಗಳಲ್ಲಿ (`ಸಿದ್ಧರಾಮ ಚಾರಿತ್ರ') ಮಾನವೀಯತೆಯ ಪರಾಕಾಷ್ಠೆಯನ್ನು ನಾವು ಕಾಣಬಹುದು.

ಸಿದ್ಧರಾಮ ತನ್ನ ನಿರಂತರವಾದ ಸಾಧನೆಯ ಮೂಲಕ ತನ್ನ ಆದರ್ಶಗಳಿಗೆ, ಕನಸುಗಳಿಗೆ ಒಂದು ರೂಪ ಕೊಟ್ಟವನು. ಈ ಸಾಧನೆಯಲ್ಲಿ ನಿಷ್ಠೆ ಎದ್ದು ಕಾಣುವ ಅಂಶ. ಈ ನಿಷ್ಠೆ ಸಾಕಾರದ ಬಗೆಗೆ ಆತ ಬೆಳೆಸಿಕೊಂಡ ತೀವ್ರತರವಾದ ಸಂಬಂಧದಿಂದ ಬಂದುದು. ಆ ಭಾವ ಅಚಲವಾದ ಶ್ರದ್ಧೆಯನ್ನು ಇಂಬುಗೊಂಡುದು. ಭಾವವು ಸಂಕೀರ್ಣದ ಸಂಕೇತ. ಭಾವಕ್ಕೆ ಗಟ್ಟಿತನ ಹಾಗೂ ಟೊಳ್ಳುತನ ಎರಡೂ ಸಾಧ್ಯ. ಸಿದ್ಧರಾಮನ ಮಾತಿನಲ್ಲೇ ಹೇಳುವುದಾದರೆ

`ಯಥಾ ಭಾವಸ್ತಥಾ ದೇವಃ' ಎಂದ ಬಳಿಕ

ದೇವರ ಬಯಲ ಭಾವ ತನ್ನಲ್ಲಿ ಇಂಬುಗೊಂಡಡೆ ಮುಕ್ತಿ

ದೇವ ರೀತಿಯೊಂದು, ತನ್ನ ರೀತಿಯೊಂದಾದ ಬಳಿಕ

ಘಟಿಸದು ಕಪಿಲಸಿದ್ಧಮಲ್ಲಿಕಾರ್ಜುನನ ಐಕ್ಯವು.

ಜ್ಞಾನಿಯಾದ ಮಾತ್ರಕ್ಕೇ ಅವನ ಭಾವಕ್ಕೆ ಗಟ್ಟಿತನ ಸೇರುವೆಯಾಗುವುದಿಲ್ಲ. ಅವನ ಭಾವ ಚಂಚಲವಿರಬಹುದು- ದೇಹಾವಸಾನದಲ್ಲಿಯ ಭಾವದಂತೆ. ಸಿದ್ಧರಾಮ ನಂಬಿರುವಂತೆ ಇಂತಹ ಭಾವ ಜನ್ಮಕ್ಕೆ ಈಡು; ನಿರ್ಭಾವವೆಂಬುದು ಜನ್ಮಕ್ಕೆ ಕಾಡುಗಿಚ್ಚು. ಸಿದ್ಧರಾಮನಿಗೆ ಸಾಧನೆಯ ಮೊದಲ ಘಟ್ಪದಲ್ಲಿ ಸಾಕಾರದ ಅಗತ್ಯವ್ದಿತು. ಸಾಧನೆಯ ನಿರಂತರಾವಸ್ಥೆಯಲ್ಲಿ ಆಕಾರ ನಷ್ಟವಾಗಿ ನಿರಾಕಾರವೇ ಸ್ಥಿರವಾಗುತ್ತದೆ. ಇದನ್ನೇ ಕೆಳಗಿನ ವಚನದಲ್ಲಿ ಅವನು ಹೇಳುತ್ತಿರುವನು.

ಆಕಾರವಿಲ್ಲದ ಮೂರ್ತಿಯ ಆಕಾರಕ್ಕೆ ತಂದು

ಪೂಜಿಸಿದೆ ನೋಡಾ, ಮನವೆ.

ಆಕಾರದ ಮೂರ್ತಿಯ ನಿರಾಕಾರಕ್ಕೆ ತಂದು

ಪೂಜಿಸಲರಿಯೆ ನೋಡಾ, ಮನವೆ.

`ಯದೃಷ್ಟ ತನ್ನಷ್ಟಂ' ಎಂದ ಬಳಿಕ,

ನಿರಾಕಾರ ನಿಜನಿರ್ವಯಲವೆ ಸ್ಥಿರವೆಂದು ನಂಬು ಮನವೆ,

ಕಪಿಲಸಿದ್ಧಮಲ್ಲಿಕಾರ್ಜುನಲ್ಲಿ.

ನಿರಾಕಾರ ಸಾಕಾರಗಳ ಬಗೆಗೆ ಸಿದ್ಧರಾಮ ಸ್ಪಷ್ಟವಾದ ಉದಾಹರಣೆಗಳ ಮೂಲಕ ವಿವರಿಸುವನು-ಕುಂಬಾರ ಹಾಗೂ ಕಂಬಾರರ ಸೃಷ್ಟಿಕ್ರಿಯೆಯ ಮೂಲಕ. ಕುಂಬಾರನ ಆವಿಗೆಯ ಮಣ್ಣಿನಲ್ಲಿ ಕುಂಬಾರನಿಲ್ಲ. ಆದರೆ ಕುಂಬಾರ ತನ್ನ ವೃತ್ತಿಧರ್ಮದಲ್ಲಿ ನಿರಾಕಾರಕ್ಕೆ ಒಂದು ಆಕಾರ ಕೊಡುತ್ತಾನೆ. ಕಂಬಾರನದೂ (= ಲೋಹದ ಮೂರ್ತಿ ನಿರ್ಮಿಸುವವ) ಅದೇ ಬಗೆಯ ವರ್ತನೆ. ಒಬ್ಬ ಮಣ್ಣಿಗೆ ಆಕಾರ ಕೊಡುತ್ತಾನೆ. ಇನ್ನೊಬ್ಬ ಲೋಹಕ್ಕೆ ಆಕಾರ ಕೊಡುತ್ತಾನೆ. ಇವರ ಕ್ರಿಯೆಯ ಮೂಲಕ ನಿರಾಕಾರಕ್ಕೆ ಸಾಕಾರತ್ವ ಪ್ರಾಪ್ತಿಯಾಗುವುದು ಈ ಭೋಗ್ಯವಸ್ತುಗಳಲ್ಲಿ ಕುಂಬಾರ ಕಂಬಾರರಿರುವುಲ್ಲ. ಆದರೂ ಇವರು ಆ ವಸ್ತುಗಳ ನಿರ್ಮಿತಿಯಲ್ಲಿ ಅವ್ಯಕ್ತರಾಗಿರುವರು. ಈ ಪ್ರಪಂಚದಲ್ಲಿ ಪರಮಾತ್ಮನೂ ಕುಂಬಾರ, ಕಂಬಾರನಂತಿರುವನು.

ಸಿದ್ಧರಾಮನಲ್ಲಿ ಸಾಕಾರನಿಷ್ಠೆಗೆ ಪ್ರೇರಣೆ ಒತ್ತಾಸೆ ಬಂದುದು ಶ್ರೀಶೈಲದ ಮಲ್ಲಿಕಾರ್ಜುನನಿಂದ. ಈ ಮಾತಿಗೆ `ಎನ್ನ ಭಕ್ತಿಗೆ ಸೊನ್ನಲಿಗೆಯಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನನಾಗಿ ಬಂದಿರಿ' ಎಂಬ ಅವನ ವಚನದಲ್ಲಿನ ಉಲ್ಲೇಖವೇ ಸಾಕ್ಷಿ. ಸಿದ್ಧರಾಮನಿಗೂ ಶ್ರೀಶೈಲಕ್ಕೂ ಅವಿನಾಭಾವ ಸಂಬಂಧವಿದೆ ಇದಕ್ಕೆ ಪೂರಕವಾಗಿ ಸಿದ್ಧರಾಮನ `ಶ್ರೀಶೈಲದ ಮಹಿಮೆಯದು ಕರ್ಣಾಭರಣ..........' `ಎಲ್ಲರು ತಪವ ಮಾಡಿದರು ನಮ್ಮ ಶ್ರೀಶೈಲನ ತಪದಂತೆ ತಪದ ಒರ್ವರನು ಕಾಣೆ...' `ಜನ್ಮವನೊಮ್ಮೆ ಧರಿಸಿದ ಬಳಿಕ ಜನನವಿನಾಶ ವಿಗ್ರಹಮೂರ್ತಿಯ ಪೂಜಿಸಲೆ ಬೇಕು.....' ಎಂದು ಪ್ರಾರಂಭವಾಗುವ ವಚನಗಳನ್ನು ಪರಿಭಾವಿಸಬೇಕು. ಸಿದ್ಧರಾಮನ ವಚನಗಳಲ್ಲಿ ಅವನ ವೈಯಕ್ತಿಕಸಂಗತಿಗಳ ಉಲ್ಲೇಖಗಳು ಕಂಡುಬರುತ್ತವೆ. ಅವುಗಳಲ್ಲಿ ಒಂದು ನವಣೆಯ ಹೊಲದಲ್ಲಿ ಬಾಲಕ ಸಿದ್ಧರಾಮನಿಗೆ ದರ್ಶನವಿತ್ತು ಮನೆಗೆ ಹೋಗಿ ಮೊಸರವಲಕ್ಕಿ ತರಲು ಹೇಳಿ ಮಾಯವಾದ ಘಟನೆ `ದೇವನಿಂತವನೆಂದು ನಂಬಲಾಗದಯ್ಯಾ:ಬಾ ಎಂದು ಹೇಳಿ ಬಯಲಾದ ದೇವನೊಳ್ಳಿದನೆ?....?' ಎಂದು ಪ್ರಾರಂಭವಾಗುವ ವಚನದಲ್ಲಿ ನೋಡಬಹುದು. ಶ್ರೀಶೈಲದ ರುದ್ರಗಮ್ಮರಿಯಲ್ಲಿ ತನ್ನ ಶರೀರವನ್ನು ಈಡಾಡಹೊರಟಾಗ ಬಾಲಕ ಸಿದ್ಧರಾಮನಿಗೆ ದರ್ಶನವಿತ್ತು ಲೋಕಹಿತಕ್ಕಾಗಿ ಅವನನ್ನು ಉಳಿಸಿ ಸೊನ್ನಲಿಗೆಗೆ ಹಿಂತಿರುಗುವಂತೆ ಹೇಳಿ, ಅವನಿಗೆ ಸಾಕಾರನಿಷ್ಠೆಯುಂಟಾಗುವಂತೆ ತಾನೇ

ಲಿಂಗಾಕಾರವಾಗಿ ಬಂದು, ಪೂಜೆಯನ್ನು ಅವನಿಂದ ಸ್ವೀಕರಿಸಿದವನು ಶ್ರೀಗಿರಿಯ ಮಲ್ಲಯ್ಯನೇ. ಸಿದ್ಧರಾಮನೇ ತನ್ನ ವಚನವೊಂದರಲ್ಲಿ ಹೀಗೆ ಹೇಳಿರುವನು:

ನಟ್ಟಡವಿಯೊಳಗೆ ಇರುಳು-ಹಗಲೆನಲ್ಲಿದೆ

`ಅಪ್ಪಾ! ಅಯ್ಯಾ!' ಎಂದು ನಾನರಸುತ್ತ ಹೋದಡೆ,

`ನಾನಿದ್ದೇನೆ, ಬಾ ಮಗನೆ' ಎಂದು ಕರೆದು, ಎನ್ನ ಕಂಬನಿದೊಡೆದು,

ತನ್ನ ನಿಜವ ತೋರಿದ ಪಾದವಿಂದೆನಲ್ಲಿಗೆ ನಡೆದುಬಂದಡೆ

ನಾನರಿಯದೆ ಮರುಳುಗೊಂಡೆಹೆನೆಂದು ಎನ್ನ ಮನದೊಳಗೆಚ್ಚರ ಮಾಡಿದ.

ಆತನನರಸಿಕೊಂಡು ಬಂದೆನ್ನ ಹೃದಯಲಿಂಬಿಟ್ಟುಕೊಂಬೆ,

ಎನ್ನ ಕಪಿಲಸಿದ್ಧಮಲ್ಲಿಕಾರ್ಜುನ.


ನಿರ್ಗಮನ